ಬಿಜೆಪಿಗೆ ಸಿದ್ದು ಬಂದರೆ ಸ್ವಾಗತ: ಶ್ರೀರಾಮುಲು
ಬೆಂಗಳೂರು, ಡಿ. 18 : ಹೆಚ್ಚು ಕಡಿಮೆ ಕಾಂಗ್ರೆಸ್ ಪಕ್ಷವನ್ನು ತೊರೆಯಲು ನಿರ್ಧರಿಸಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಸಂಪೂರ್ಣ ಕತ್ತಲೆಯಲ್ಲಿದೆ. ಬಿಜೆಪಿ ಸೇರಿದರೆ ಹೇಗೆ ಎಂಬ ಲಾಭದ ಕುರಿತು ಸಿದ್ದು ಲೆಕ್ಕಾಚಾರ ಹಾಕುತ್ತಿರುವ ಬೆನ್ನಲ್ಲೇ ಆಪರೇಷನ್ ಕಮಲದ ರೂವಾರಿಯೊಬ್ಬರಾದ ಆರೋಗ್ಯ ಸಚಿವ ಶ್ರೀರಾಮುಲು ಸಿದ್ದು ಅವರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆಯಾಗಲು ಬಯಸಿದಲ್ಲಿ ಮುಕ್ತ ಮನಸ್ಸಿನಿಂದ ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.
ದೇವದುರ್ಗ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಲ್ಲಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಬಿಜೆಪಿ ಸೇರುವ ಮನಸ್ಸು ಮಾಡಿದಲ್ಲಿ ಅವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ ಎಂದ ಶ್ರೀರಾಮುಲು, ಕಾಂಗ್ರೆಸ್ ಪಕ್ಷ ಅವರನ್ನು ನಡೆಸಿಕೊಂಡ ರೀತಿ ತುಂಬಾ ಕೆಟ್ಟದಾಗಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ವರ್ತನೆಯಿಂದ ತೀವ್ರ ಬೇಸರ ವ್ಯಕ್ತಪಡಿಸಿರುವ ಸಿದ್ದು ಬೆಂಬಲಗ ಮುಕುಡಪ್ಪ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯದ ಎಂಟು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ. ಸಂಪೂರ್ಣ ಮೊಲೆಗುಂಪಾಗಿ ಮಾಡಲಾಗಿದೆ ಎಂದು ಅವರು ತಮ್ಮ ಆಕ್ರೋಶವನ್ನು ತೋಡಿಕೊಂಡಿದ್ದಾರೆ. ಇತ್ತೀಚೆಗೆ ಸುದ್ದಿಯೊಂದು ಹಬ್ಬಿರುವಂತೆ ಸಿದ್ದರಾಮಯ್ಯ ಕರ್ನಾಟಕ ಜನತಾ ದಳ ಪಕ್ಷವನ್ನು ಸ್ಫಾಪಿಸುವ ಸಾಧ್ಯತೆ ಇದರಿಂದ ಮತ್ತಷ್ಟು ಹೆಚ್ಚಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಸಿದ್ದು ಮೈತ್ರಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications