ಉಗ್ರರ ವಿರುದ್ಧ ಭೇಟೆ ಆರಂಭಿಸಿದ ಪಾಕ್
ಇಸ್ಲಾಮಾಬಾದ್, ಡಿ. 8 : ಕೊನೆಗೂ ಭಾರತದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಸರ್ಕಾರ ಭಯೋತ್ಪಾದನೆ ಹತ್ತಿಕ್ಕುವುದಕ್ಕೆ ಮುಂದಾಗಿದೆ. ಪಾಕಿಸ್ತಾನ ಮೂಲಕ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಮೇಲೆ ಭಾನುವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದೆ.
ಪಾಕಿಸ್ತಾನದ ಮುಜಫರಾಬಾದ್ ಹೊರವಲಯದ ಸವಾಯಿ ಪ್ರಾಂತ್ಯದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಮುಜಫರಬಾದ್ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶ ದಲ್ಲಿರುವ ಪ್ರಮುಖ ಪ್ರದೇಶವಾಗಿದ್ದು, ಉಗ್ರ ಸಂಘಟನೆಗಳು ತಮ್ಮ ವಿಧ್ವಂಸಕ ಕೃತ್ಯಗಳ ರೂಪಿಸುವುದು ಇಲ್ಲಿಂದಲೇ ಎನ್ನಲಾಗಿದೆ. ಈಗಾಗಲೇ ಈ ಪ್ರದೇಶವನ್ನು ಸಂಪೂರ್ಣವಾಗಿ ಪಾಕ್ ಸೇನೆ ಸುತ್ತವರೆದು ತನ್ನ ವಶಕ್ಕೆ ತೆಗೆದುಕೊಂಡಿದೆ. ಆ ಮಧ್ಯೆ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಬೆಂಬಲಿಸುವ ಜಮಾತ್ ಉದ್ ದಾವಾ ಎಂಬ ಎಂಬ ಧಾರ್ಮಿಕ ಸಂಘಟನೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ತಿಂಗಳು ಮುಂಬೈನಲ್ಲಿ ನಡೆದ ಮುಂಬೈ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡವಿರುವುದು ತನಿಖೆಯಿಂದ ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದಲ್ಲಿರುವ ಭಾರತಕ್ಕೆ ಬೇಕಿರುವ 20 ಮಂದಿ ಮೊಸ್ಟ್ ವಾಟೆಂಡ್ ಉಗ್ರರನ್ನು ಹಸ್ತಾಂತರಿಸಿ ಎಂದು ಗುಟುರು ಹಾಕಿತ್ತು. ಅಲ್ಲದೆ ಪಾಕಿಸ್ತಾನದಲ್ಲಿ ಲಷ್ಕರ್ ಇ ತೊಯ್ಬಾ ಸಂಘಟನೆ ಮೇಲೆ ಶೀಘ್ರದಲ್ಲಿ ಕ್ರಮಕೈಗೊಳ್ಳದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿತ್ತು.
ಭಾರತದ ಧ್ವನಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಜಾ ರೈಸ ಹಾಗೂ ಸೆನೆಟರ್ ಜಾನ್ ಮೆಕೇನ್ ಕೂಡಾ ಪಾಕಿಸ್ತಾನದ ಮೇಲೆ ತೀವ್ರ ಒತ್ತಡ ಹೇರಿದ್ದರು. ಉಗ್ರರ ಮೇಲೆ ಕ್ರಮಕೈಗೊಳ್ಳದಿದ್ದರೆ, ಭಾರತ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಸಾಧ್ಯತೆಗಳಿವೆ ಎಂದು ಮೆಕೇನ್ ಸ್ಪಷ್ಟವಾಗಿ ಹೇಳಿದರು. ರೈಸ್ ಅಂತೂ ಪಾಕ್ ಸರ್ಕಾರಕ್ಕೆ ಭಾರಿ ಎಚ್ಚರಿಕೆ ನೀಡಿದ್ದರು, ಉಗ್ರ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ಅಮೆರಿಕ ಪಾಕ್ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದರು, ಈ ಎಲ್ಲದರ ಪರಿಣಾಮವಾಗಿ ಪಾಕ್ ಸರ್ಕಾರ ಲಷ್ಕರ್ ಇ ತೊಯ್ಬಾ ಸಂಘಟನೆ ಮೇಲೆ ಕಾರ್ಯಚರಣೆ ಆರಂಭಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications