ಮುಂಬೈಸ್ಫೋಟ ರುವಾರಿ ಲಖ್ವಿ ಬಂಧನ?
ಇಸ್ಲಾಮಾಬಾದ್, ಡಿ. 8 : ಮುಂಬೈ ಭಯೋತ್ಪಾದನೆಯ ಪ್ರಮುಖ ರೂವಾರಿ ಎನ್ನಲಾದ ಲಷ್ಕರ್ ಇ ತೊಯ್ಬಾ ಸಂಘಟನೆಯ ಮುಖಂಡ ಝಾಕೀರ್ ರೆಹಮಾನ್ ಲಖ್ವಿ ಸೇರಿದಂತೆ 20 ಮಂದಿಯನ್ನು ಪಾಕ್ ಆಕ್ರಮಿಕ ಕಾಶ್ಮೀರದ ಮುಜಫರಬಾದ್ ಪ್ರದೇಶದಲ್ಲಿ ಪಾಕಿಸ್ತಾನದ ಭದ್ರತಾ ಪಡೆ ತನ್ನ ವಶಕ್ಕೆ ತೆಗೆದುಕೊಂಡಿದೆ ಎನ್ನಲಾಗಿದೆ.
ಭಾರತ ಮತ್ತು ಅಮೆರಿಕ ಹೇರಿದ ತೀವ್ರ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಉಗ್ರ ಸಂಘಟನೆಗಳು ನೆಲೆಸಿರುವ ಅಡಗು ತಾಣಗಳ ಮೇಲೆ ಪಾಕ್ ಭದ್ರತಾ ಪಡೆ ದಾಳಿ ನಡೆಸತೊಡಗಿವೆ. ಪಾಕ್ ಆಕ್ರಮಿಕ ಕಾಶ್ಮೀರದ ಮುಜಫರಬಾದ್ ನ ಸಾವಾಯಿ ಪ್ರಾಂತ್ಯದಲ್ಲಿ ಇಂದು ಬೆಳಗ್ಗೆ ಹೆಲಿಕ್ಯಾಪ್ಟರ್ ಮೂಲಕ ಬಂದಿಳಿದ ಪಾಕಿಸ್ತಾನದ ಭದ್ರತಾಪಡೆ, ಉಗ್ರರ ಬೇಟೆಯ ಕಾರ್ಯಾಚರಣೆ ಆರಂಭಿಸಿದೆ. ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 20 ಮಂದಿಯನ್ನು ವಶ ತೆಗೆದುಕೊಳ್ಳಲಾಗಿದ್ದು, ಮುಂಬೈ ಭಯೋತ್ಪಾದನೆಯ ಮುಖ್ಯ ಆರೋಪಿ ಝಾಕೀರ್ ರೆಹಮಾನ್ ಲಖ್ವಿ ಕೂಡಾ ಬಂಧಿತರಲ್ಲಿ ಸೇರಿದ್ದಾರೆ.
ಮುಂಬೈ ಭಯೋತ್ಪಾದನೆಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನೀಡಿರುವ ಮಾಹಿತಿ ಪ್ರಕಾರ, ಮುಂಬೈ ಭಯೋತ್ಪಾದನೆಗೆ ಸಂಚು ರೂಪಿಸಿರುವುದು ಝಾಕೀರ್ ರೆಹಮಾನ್ ಲಖ್ವಿ, ಈತ ಲಷ್ಕರ್ ತೊಯ್ಬಾ ಸಂಘಟನೆಯ ಪ್ರಮುಖ ಎಂದು ವಿಚಾರಣೆ ವೇಳೆ ಬಹಿರಂಗಪಡಿಸಿದ್ದ. ಪಾಕ್ ಸೈನಿಕರಿಗೆ 20 ಮಂದಿ ಉಗ್ರರು ಸಿಕ್ಕಿಬಿದ್ದಿದ್ದಾರೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
(ದಟ್ಸ್ ಕನ್ನಡ ವಾರ್ತೆ)
ಪಾಕ್ ವಿರುದ್ಧ ಭಾರತ ಸಮರ ತಪ್ಪಲ್ಲ:ಒಬಾಮಾ












Click it and Unblock the Notifications