ರೈತರ ಆತ್ಮಹತ್ಯೆ ಪರಿಹಾರ ಹಣ ದುರುಪಯೋಗ
ದಾವಣಗೆರೆ, ಡಿ. 8 : ಆತ್ಮಹತ್ಯೆ ಮಾಡಿಕೊಂಡ ರೈತರ ಸಂಬಂಧಿಕರಿಗೆ ಕೊಡಬೇಕಾದ 200 ಕೋಟಿ ರು. ಪರಿಹಾರ ಹಣವನ್ನು ವಿವಿಧ ಸಹಕಾರಿ ಸಂಸ್ಥೆಗಳು ದುರುಪಯೋಗ ಮಾಡಿಕೊಂಡ ಹಗರಣದ ವಿವರವಾದ ತನಿಖೆಯನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪರಿಹಾರ ಹಣವನ್ನು ಮೃತ ರೈತರ ಸಂಬಂಧಿಗಳಿಗೆ ನೀಡದೆ ಬೇನಾಮಿ ಹೆಸರಿನಲ್ಲಿ ಸಹಕಾರಿ ಸಂಸ್ಥೆಗಳು ಗುಳುಂ ಮಾಡಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸರ್ಕಾರ ಮುಂದಾಗಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಘೋಷಿಸಿದರು.
ಇಂದು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ತನಿಖೆಯನ್ನು ಸಿಓಡಿಗೆ ವಹಿಸಲು ನಿರಾಕರಿಸಿದರು. ತನಿಖಾ ಆಯೋಗದ ವಿವರವನ್ನು ಶೀಘ್ರವೇ ನೀಡಲಾಗುವುದು ಎಂದು ಅವರು ಹೇಳಿದರು. ತಪ್ಪಿತಸ್ಥರು ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಯಡಿಯೂರಪ್ಪ ನುಡಿದರು.
ಕಳೆದ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ನಂತರ ಬಿಜೆಪಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸ್ಥಿರ ಆಡಳಿತದ ಬಗ್ಗೆ ಮುಂಬರುವ ಉಪಚುನಾವಣೆಯಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ಅವರು ತಿಳಿಸಿದರು. ಡಿಸೆಂಬರ್ 27ರಂದು ನಡೆಯಲಿರುವ ಉಪಚುನಾವಣೆಯ ಫಲಿತಾಂಶ ತಮ್ಮ ನಾಯಕತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಅದು ಬಿಜೆಪಿ ಸರ್ಕಾರದ ನಿರ್ವಹಣೆಯ ಮಾನದಂಡವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಉಪಚುನಾವಣೆಯ ನಂತರ ಸಂಪುಟವನ್ನು ಪುನಾರಚಿಸುವುದಿಲ್ಲ ಮತ್ತು ಉಪಮುಖ್ಯಮಂತ್ರಿ ಸ್ಥಾನ ರಚಿಸುವ ಸಾಧ್ಯತೆಯನ್ನು ತಳ್ಳಿಹಾಕಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಗನನ್ನು ಶಿವಮೊಗ್ಗದಿಂದ ನಿಲ್ಲಿಸುವ ಸಾಧ್ಯತೆ ಕುರಿತು ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದರು. ತಕ್ಕ ಸಮಯದಲ್ಲಿ ಈ ಕುರಿತಂತೆ ಪಕ್ಷವೇ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಮುಗುಮ್ಮಾಗಿ ಉತ್ತರಿಸಿದರು.
ಗುರುತಿನ ಚೀಟಿ : ರಾಷ್ಟ್ರದಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೊರರಾಜ್ಯದಿಂದ ಬರುವ ಜನರಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ಸದ್ಯದಲ್ಲಿಯೇ ಕರ್ನಾಟಕ ಸರ್ಕಾರ ಹಮ್ಮಿಕೊಳ್ಳಲಿದೆ ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications