ಮಂಡ್ಯದಲ್ಲಿ ಪ್ರತ್ಯೇಕ ಅಪಘಾತಗಳಲ್ಲಿ 6 ಸಾವು
ಮಂಡ್ಯ, ಡಿ. 6 : ಜಿಲ್ಲೆಯಲ್ಲಿ ಸಂಭವಿಸಿರುವ ಕಳೆದ ರಾತ್ರಿ ಸಂಭವಿಸಿರುವ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಆರು ಜನ ದುರ್ಮರಣಕ್ಕೀಡಾಗಿದ್ದು, 30 ಜನ ಗಾಯಗೊಂಡಿದ್ದಾರೆ. ಮದ್ದೂರು ಬಳಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಜೀಪಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳು ಸಾವಿಗೀಡಾಗಿದ್ದಾರೆ ಮತ್ತು ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ಮೂವರು ಗಾಯಾಳುಗಳಾಗಿದ್ದಾರೆ. ಮೃತರನ್ನು ಚಿಕ್ಕಪುಟ್ಟಯ್ಯ (45) ಮತ್ತು ರಂಗನಾಥ್ (38) ಎಂದು ಗುರುತಿಸಲಾಗಿದೆ.
ಇನ್ನೊಂದು ಅಪಘಾತದಲ್ಲಿ 35 ಜನರಿಂದ ತುಂಬಿ ತುಳುಕುತ್ತಿದ್ದ ಟೆಂಟೋ ಪಲ್ಟಿ ಹೊಡೆದ ಪರಿಣಾಮ ಆರು ವರ್ಷದ ಮಗು ಸೇರಿದಂತೆ ನಾಲ್ವರು ಹತರಾಗಿದ್ದಾರೆ. ಮೃತರೆಲ್ಲರೂ ಮೈಸೂರು ಜಿಲ್ಲೆಯ ಟಿ ನರಸೀಪುರಕ್ಕೆ ಸೇರಿದವರಾಗಿದ್ದು ಮುತ್ತತ್ತಿಗೆ ಪೂಜೆಗೆಂದು ಹೋಗುತ್ತಿದ್ದರು. ಸತ್ತವರನ್ನು ಹರೀಶ್ (6), ಪಲ್ಲವಿ (21), ನಾಗೇಶ್ (31) ಮತ್ತು ರಂಗಪ್ಪ (35) ಎಂದು ಗುರುತಿಸಲಾಗಿದೆ.
***
ಧನಪಿಶಾಚಿ ಇಂಜಿನಿಯರ್ ಲೋಕಾಯುಕ್ತರ ಬಲೆಗೆ
ಮಡಿಕೇರಿ, ಡಿ. 6 : ತನ್ನದೇ ಇಲಾಖೆಯ ದಿನಗೂಲಿ ನೌಕರನಿಂದ ಲಂಚ ಪಡೆಯುತ್ತಿದ್ದಾಗ ನೀರಾವರಿ ಇಲಾಖೆಯ 'ಧನಪಿಶಾಚಿ' ಎಕ್ಸಿಕ್ಯೂಟೀವ್ ಇಂಜಿನಿಯರನ್ನು ಲೋಕಾಯುಕ್ತ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಕಳೆದ ಏಳು ತಿಂಗಳಿನಿಂದ ನೀಡದಿರುವ ಸಂಬಳವನ್ನು ಕೇಳಿದ್ದಕ್ಕಾಗಿ ಲಂಚ ಕೇಳಿದ ಇಂಜಿನಿಯರ್ ಸಿದ್ದರಾಮೇಶ್ವರ ಸ್ವಾಮಿ ವಿರುದ್ಧ ದಿನಗೂಲಿ ನೌಕರ ಲೋಕಾಯುಕ್ತರಿಗೆ ದೂರು ನೀಡಿದ್ದ. ಸ್ವಾಮಿ ಕೇಳಿದ್ದ 2,500 ರು.ಗಳಲ್ಲಿ 1,500 ರು.ಗಳನ್ನು ನೌಕರ ನೀಡಿದ್ದ. ಉಳಿದ 1,000 ರು. ನೀಡುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಲಾಗಿದ್ದು, ವಿಚಾರಣೆಯನ್ನು ಮುಂದುವರಿಸಿದ್ದಾರೆ.
***
ಜೆಎಸ್ಎಸ್ ಗೆ ಸಾಕ್ಷರತಾ ಪ್ರಶಸ್ತಿ
ಶಿವಮೊಗ್ಗ, ಡಿ. 6 : ಅಖಿಲ ಭಾರತ ಅನಕ್ಷರತೆ ನಿವಾರಣಾ ಸಮಿತಿ ಸ್ಥಾಪಿಸಿರುವ ಲಕ್ಷ್ಮಿ ಮೆನನ್ ಸಾಕ್ಷರತಾ ಪ್ರಶಸ್ತಿಯನ್ನು ಜನ ಶಿಕ್ಷಣ ಸಂಸ್ಥಾನದ ಜಿಲ್ಲಾ ಘಟಕ ಪಡೆದಿದೆ. ಕಳೆದ ಎಂಟು ವರ್ಷಗಳಿಂದ ನಿರಕ್ಷತೆಯ ನಿವಾರಣೆಗಾಗಿ ಜೆಎಸ್ಎಸ್ ಸತತವಾಗಿ ಶ್ರಮಿಸುತ್ತಿದೆ. ಹೆಚ್ಚಾಗಿ ಮಹಿಳೆಯರಲ್ಲಿ ಅನಕ್ಷರತೆಯನ್ನು ನಿವಾರಿಸುವಲ್ಲಿ ಸಂಸ್ಥಾನ ಸಫಲವಾಗಿದೆ ಎಂದು ಜಿಲ್ಲಾ ಘಟಕದ ನಿರ್ದೇಶಕ ಲಕ್ಷ್ಮಿನಾರಾಯಣ ಕಾಶಿ ಸಂತಸ ವ್ಯಕ್ತಪಡಿಸಿದ್ದಾರೆ. ಸಾಕ್ಷರರಾಗಿರುವ ಯುವಕ, ಯುವತಿಯರಿಗಾಗಿ ಏಳು ಉತ್ಪಾದನಾ ಘಟಕಗಳನ್ನೂ ಸಂಸ್ಥೆ ಸ್ಥಾಪಿಸಿದೆ. ಇಲ್ಲಿಯವರೆಗೆ 26,000 ಜನರಿಗೆ ಇಲ್ಲಿ ತರಬೇತಿ ನೀಡಲಾಗಿದ್ದು, ಅವರಲ್ಲಿ 16,000 ಸಾವಿರ ಜನ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಸಂಪಾದಿಸಿದ್ದಾರೆಂದು ಅವರು ಹೇಳಿದ್ದಾರೆ.
***
ಗಡಗಡ ನಡುಗುತ್ತಿರುವ ಬಾಲಗಕೋಟೆ
ಬಾಗಲಕೋಟೆ, ಡಿ. 6 : ಹೇಮಂತ ಋತುವಿನಲ್ಲಿ ಚಳಿಗಾಳಿ ಇಡೀ ರಾಜ್ಯವನ್ನು ಅಮರಿಕೊಳ್ಳುತ್ತಿದೆ. ಬೇಸಿಗೆಯಲ್ಲಿ ಬಿರಬಿರನೆ ಉರಿಯುತ್ತಿದ್ದ ಬಾಗಲಕೋಟೆಯಲ್ಲಿ ಈಗ ಮುದುರಿ ರಗ್ಗು ಹೊದ್ದು ಮಲಗುವಂಥ ಚಳಿ. ರಾಜ್ಯದ ಕನಿಷ್ಠ ಉಷ್ಣಾಂಶ ಬಾಲಗಕೋಟೆಯಲ್ಲಿ ವರದಿಯಾಗಿದೆ. ಅಲ್ಲಿ 12.8 ಉಷ್ಣಾಂಶ ದಾಖಲಾಗಿದೆ.
***
ಮಡಿಕೇರಿಯಲ್ಲಿ ಹುತಾತ್ಮರ ನೆನಪು
ಮಡಿಕೇರಿ, ಡಿ. 6 : ನಿವೃತ್ತ ಸೇನಾಧಿಕಾರಿಗಳು ಮತ್ತು ಜಿಲ್ಲಾಡಳಿತ ಯುದ್ಧದಲ್ಲಿ ಮಡಿದ ಸೇನಾನಿಗಳ ನೆನಪಿಗಾಗಿ ಶುಕ್ರವಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಯುದ್ಧ ಸ್ಮಾರಕದಲ್ಲಿ ನೆನಪಿನ ಗುಚ್ಛ ಅರ್ಪಿಸಿ ಯುದ್ಧ ಸೇನಾನಿಗಳ ಶೌರ್ಯ, ತ್ಯಾಗವನ್ನು ಸ್ಮರಿಸಲಾಯಿತು. ನಿನ್ನೆಯ ದಿನವನ್ನು ಸೇನೆ 'ಫ್ಲಾಗ್ ಡೇ'ಯನ್ನಾಗಿ ಆಚರಿಸುತ್ತಿದೆ. ನಿವೃತ್ತ ಬ್ರಿಗೇಡಿಯರ್ ಎಮ್ಎ ದೇವಯ್ಯ, ಸಹಾಯಕ ಕಮಿಷನರ್ ಬಲದೇವ್ ಕೃಷ್ಣ, ಪೊಲೀಸ್ ಸುಪರಿಂಟೆಂಡೆಂಟ್ ಸುರೇಶ್, ನಿವೃತ್ತ ಏರ್ ಮಾರ್ಷಲ್ ಕೆಸಿ ಕಾರ್ಯಪ್ಪ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಪ್ಪಚ್ಚು, ಹೋಂ ಗಾರ್ಡ್ಸ್ ಕಮಾಂಡಂಟ್ ಓಎಸ್ ಚೆಂಗಪ್ಪ ಮತ್ತಿತರರು ಹೂಗುಚ್ಛವನ್ನು ಅರ್ಪಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications