ಕನ್ನಡ ತಂತ್ರಾಂಶ ಅಭಿವೃದ್ಧಿಗೆ ತಜ್ಞರ ಸಮಿತಿ
ಬೆಂಗಳೂರು, ಡಿ.6: ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದೆ. ಗಣಕೀಕರಣದ ಎಲ್ಲಕಾರ್ಯಗಳು ಕನ್ನಡ ಭಾಷೆಯಲ್ಲಿ ಆಗುವಂತೆ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಸಮಿತಿಯನ್ನು ರಚಿಸಿದೆ.
ಸಮಿತಿಯ ಸದಸ್ಯರಾಗಿ ಖ್ಯಾತ ಸಾಹಿತಿ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಕಂಬಾರ, ಗಣಕ ತಜ್ಞ ಅನಂತ್ ಕೊಪ್ಪರ್, ಡಾ.ಪವನಜ, ಕನ್ನಡ ಗಣಕ ಪರಿಷತ್ತಿನ ನರಸಿಂಹಮೂರ್ತಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಐಟಿಬಿಟಿ ಇಲಾಖೆ ನಿರ್ದೇಶಕ, ಕನ್ನಡ ವಿಶ್ವವಿದ್ಯಾಲಯ ಹಾಗೂ ಎನ್ ಐಸಿ ಸಂಸ್ಥೆಯ ತಲಾ ಒಬ್ಬ ಪ್ರತಿನಿಧಿಯನ್ನು ನೇಮಕ ಮಾಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದು, ಕನ್ನಡ ತಂತ್ರಾಂಶ ಕಾರ್ಯಯೋಜನೆಯನ್ನು ರೂಪಿಸಿ ಮುಂದಿನ 3 ತಿಂಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ ಸೂಚಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications