ಅಡ್ವಾಣಿಯನ್ನು ನಮ್ಮ ವಶಕ್ಕೆ ಒಪ್ಪಿಸಿ: ಲಷ್ಕರ್
ಇಸ್ಲಾಮಾಬಾದ್, ಡಿ.6: ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿ ಅವರನ್ನು ನಮಗೆ ಹಸ್ತಾಂತರಿಸುವಂತೆ ಪಾಕಿಸ್ತಾನದ ಪ್ರಧಾನಿ ಭಾರತವನ್ನು ಒತ್ತಾಯಿಸಬೇಕು ಎಂದು ಲಷ್ಕರ್ ಇ ತೊಯ್ಬಾ ಸಂಘಟನೆಯ ಧಾರ್ಮಿಕ ಮುಖಂಡರು ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.
ದಾವುದ್ ಇಬ್ರಾಹಿಂ,ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಜೈಶ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ ಹಲವು ಉಗ್ರರನ್ನು ನಮ್ಮ ವಶಕ್ಕೆ ಒಪ್ಪಿಸಿ ಎಂದು ಭಾರತ ತಾಕೀತು ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ನ ಹಲವು ರಾಜಕಾರಣಿಗಳು ಮತ್ತು ಲಷ್ಕರ್ ಮುಖಂಡರು ಆಡ್ವಾಣಿ ಅವರನ್ನು ನಮ್ಮ ವಶಕ್ಕೆ ನೀಡಿ ಎಂದು ಕೇಳಿದ್ದಾರೆ.
ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಆಲಿ ಜಿನ್ನಾ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಧುರೀಣ ಆಡ್ವಾಣಿ ಸೇರಿದಂತೆ 12 ಮಂದಿಯನ್ನು ತಲೆಮರೆಸಿಕೊಂಡವರು ಎಂದು ಪಾಕ್ ಘೋಷಿಸಿತ್ತು. ಹಾಗಾಗಿ ಅವರನ್ನು ಪಾಕ್ ವಶಕ್ಕೆ ಕೊಡುವಂತೆ ಭಾರತ ಸರಕಾರವನ್ನು ಕೇಳಿ ಎಂದು ಪ್ರಧಾನಿ ಯೂಸುಫ್ ರಾಜ ಗಿಲಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ.
ಮುಂಬೈ ಸ್ಫೋಟದ ನಂತರ ಪಾಕ್ ನತ್ತ ಬೊಟ್ಟು ಮಾಡುತ್ತಿರುವ ಭಾರತದ ಎದುರು ತಲೆ ತಗ್ಗಿಸಿ ನಿಲ್ಲುವ ಬದಲು ಕಠಿಣ ನಿಲುವು ತಾಳಬೇಕು. ನಾವು, ಯಾವ ತಪ್ಪನ್ನು ಮಾಡದಿರುವಾಗ ಹಿಂಜರಿಯುವ ಪ್ರಮೇಯವೆ ಬೇಡ ಎನ್ನುವ ಒಕ್ಕೊರಲಿನ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications