ವಿರಾಜಪೇಟೆಯಲ್ಲಿ ಶಂಕಿತ ಉಗ್ರರ ಸೆರೆ
ಬೆಂಗಳೂರು, ನ. 28 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಕೊಡಗಿನ ವಿರಾಜ್ ಪೇಟೆ ಬಳಿಯ ಕರ್ನಾಟಕ-ಕೇರಳ ಗಡಿ ಪ್ರದೇಶದಲ್ಲಿ ಮೂವರು ಉಗ್ರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಒಳಪಡಿಸಲಾಗಿದೆ. ಈ ಸಂಗತಿಯನ್ನು ಶುಕ್ರವಾರ ಮಧ್ಯಾನ್ಹ ಗೃಹ ಸಚಿವ ಡಾ ವಿ ಎಸ್ ಆಚಾರ್ಯ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಂಧಿತರಾಗಿರುವ ಮೂವರು ಮುಂಬೈ ಸ್ಫೋಟ ಹೊಣೆ ಹೊತ್ತಿರುವ ಡೆಕ್ಕನ್ ಮುಜಾಹಿದೀನ್ ಸಂಘಟನೆಯ ಕಾರ್ಯಕರ್ತರು ಇರಬಹುದು ಎಂದು ಶಂಕಿಸಲಾಗಿದೆ ಎಂದರು. ಕೇಂದ್ರ ಗುಪ್ತಚರ ಇಲಾಖೆಯ ಸಹಾಯದ ಮೂಲಕ ಗುರುವಾರ ರಾತ್ರಿಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಚಾರ್ಯ ಸ್ಪಷ್ಟಪಡಿಸಿದರು.
ಇನ್ನೊದೆಡೆ ಕಾಸರಗೋಡಿನ ಬೇಕಲ್ ನ ಸಮುದ್ರ ತೀರದಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದ ಹಡಗೊಂದು ಕಾಣಿಸಿಕೊಂಡಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಕೋಸ್ಟ್ ನ ಭದ್ರತಾ ಸಿಬ್ಬಂದಿಗಳು ತೀವ್ರ ಶೋಧ ನಡೆಸಿದರೂ ಹಡಗು ಪತ್ತೆಯಾಗಲಿಲ್ಲ ಎಂದು ಆಚಾರ್ಯ ಹೇಳಿದರು.
ಮುಂಬೈ ಭಯೋತ್ಪಾದನೆ ಹಿನ್ನೆಲೆಯಲ್ಲಿ ಕರ್ನಾಟಕದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು ಮುಂಜಾಗ್ರತಾ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದರು. ರಾಜ್ಯ ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡುವಂತೆ ಆಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications