ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ದಾಳಿ : ಸೋಮಶೇಖರ್ ಆಯೋಗದಿಂದ ವಿಚಾರಣೆ

By Staff
|
Google Oneindia Kannada News

Arch Bishop Barnard Moras and Justice Somashekhar
ಆನೇಕಲ್: ನ. 8 : ರಾಜ್ಯದ ವಿವಿಧೆಡೆ ಪ್ರಾರ್ಥನಾ ಮಂದಿರಗಳ ಮೇಲೆ ನಡೆದಿರುವ ದಾಳಿ ಕುರಿತಂತೆ ನೇಮಕಗೊಂಡ ನ್ಯಾ. ಬಿ.ಕೆ. ಸೋಮಶೇಖರ್ ಅವರ ನೇತೃತ್ವದ ವಿಚಾರಣಾ ಆಯೋಗ ಯಡವನಹಳ್ಳಿಯ ಸಂತ ಆಂತೋನಿಯವರ ನೂತನ ದೇವಾಲಯವನ್ನು ಪರಿಶೀಲಿಸುವುದರೊಂದಿಗೆ ವಿಚಾರಣಾ ಪ್ರಕ್ರಿಯೆಯನ್ನು ಶುಕ್ರವಾರ ಪ್ರಾರಂಭಿಸಿತು.

ದೇವಾಲಯದ ಪ್ರಾಂಗಣಕ್ಕೆ ಆಗಮಿಸಿದ ನ್ಯಾ. ಬಿ.ಕೆ. ಸೋಮಶೇಖರ್ ಅವರನ್ನು ಬೆಂಗಳೂರು ಮಹಾ ಧರ್ಮಾಧ್ಯಕ್ಷ (ಆರ್ಚ್ ಬಿಷಪ್ ಆಫ್ ಬೆಂಗಳೂರು) ಡಾ: ಬರ್ನಾಡ್ ಮೊರಾಸ್ ಅವರು ಬರಮಾಡಿಕೊಂಡು ಚರ್ಚ್‌ನಲ್ಲಿ ನಡೆದ ಘಟನೆಯಿಂದ ಉಂಟಾದ ಭೌತಿಕ ಹಾನಿ ಹಾಗೂ ಮಾನಸಿಕ ಆಘಾತ ಕುರಿತು ವಿವರಿಸಿದರು.

ಸತ್ಯಶೋಧನಾ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮುನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಒಳಿತು ಎಂದು ತಿಳಿಸಿದ ನ್ಯಾ: ಸೋಮಶೇಖರ್ ಅವರು ಚರ್ಚ್‌ನಲ್ಲಿ ಪ್ರಾರ್ಥನೆ ನಡೆಸುವಂತೆ ಮಹಾ ಧರ್ಮಾಧ್ಯಕ್ಷರನ್ನು ವಿನಂತಿಸಿದ್ದು ಅಲ್ಲಿ ನೆರೆದ ಜನಸ್ತೋಮ ಹಾಗೂ ಸಮುದಾಯದವರಲ್ಲಿ ಅಚ್ಚರಿ ಹಾಗೂ ಸಂತಸ ಮೂಡಿಸಿತು. ನಂತರ, ನ್ಯಾ: ಸೋಮಶೇಖರ್ ಅವರು ಚರ್ಚ್‌ನಲ್ಲಿ ಉಂಟಾಗಿರುವ ಹಾನಿ ಕುರಿತ ಘಟನಾವಳಿಗಳನ್ನು ಸವಿವರವಾಗಿ ಪರಿಶೀಲಿಸಿದರು.

ತದನಂತರ ಪ್ರಾರಂಭವಾದ ವಿಚಾರಣಾ ಸಂದರ್ಭದಲ್ಲಿ ಚರ್ಚ್‌ನಲ್ಲಿ ನಡೆದಿದೆ ಎನ್ನಲಾದ ದಾಂದಲೆ ಕುರಿತಂತೆ ಯಡವನಹಳ್ಳಿಯ ಪ್ರಾರ್ಥನಾ ಮಂದಿರದ ಧರ್ಮಗುರು ಸಂತೋಷ್ ಅವರೂ ಸೇರಿದಂತೆ ನಾಲ್ಕು ಮಂದಿ ಆಯೋಗದ ಮುಂದೆ ತಮ್ಮ ಹೇಳಿಕೆಗಳನ್ನು ನೀಡಿದರು. ಚರ್ಚ್‌ನ 14.89 ಲಕ್ಷ ರೂ. ಆಸ್ತಿ ನಷ್ಟ ಉಂಟಾಗಿದೆ ಎಂದು ಈ ಸಂದರ್ಭದಲ್ಲಿ ಅವರು ಆಯೋಗಕ್ಕೆ ತಿಳಿಸಿದರು. ನವೆಂಬರ್ 10ರಂದು ಬೆಂಗಳೂರಿನಲ್ಲಿರುವ ಆಯೋಗದ ಕಚೇರಿಯಲ್ಲಿ ನಡೆಯುವ ವಿಚಾರಣಾ ಸಂದರ್ಭದಲ್ಲಿ ಚರ್ಚ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹಾಗೂ ದಸ್ತಾವೇಜುಗಳನ್ನು ಹಾಜರುಪಡಿಸುವಂತೆ ನ್ಯಾ: ಸೋಮಶೇಖರ್ ಅವರು ಸೂಚಿಸಿದರು.

ನ್ಯಾ: ಸೋಮಶೇಖರ್ ಅವರು ಮಾತನಾಡಿ ಸತ್ಯ ಹೊರಬರಬೇಕು ಎಂಬುದೇ ಆಯೋಗದ ಹಾಗೂ ಸರ್ಕಾರದ ಉದ್ದೇಶ ಎಂದು ಈ ಸಂದರ್ಭದಲ್ಲಿ ಪ್ರಕಟಿಸಿದರಲ್ಲದೆ ಸತ್ಯವನ್ನು ಹೊರಗೆಡವಲು ಪ್ರತಿಯೊಬ್ಬರೂ ಆಯೋಗದ ಜೊತೆ ಸಹಕರಿಸಬೇಕೆಂದು ವಿನಂತಿಸಿದರು. ಸತ್ಯವನ್ನು ತಿರುಚಬೇಡಿ, ಎಲ್ಲವೂ ಪಾರದರ್ಶಕವಾಗಿರಲಿ ಹಾಗೂ ಎಲ್ಲವನ್ನೂ ಜನಸಾಮಾನ್ಯರಿಗೆ ತಿಳಿಸಿ ಎಂದು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಸಲಹೆ ಮಾಡಿದರು.

ಆಯೋಗದ ಕಾರ್ಯದರ್ಶಿ ಎನ್. ವಿದ್ಯಾಶಂಕರ್, ಆಯೋಗದ ಕಾನೂನು ಸಲಹೆಗಾರ್ತಿ ಹೇಮಲತಾ ಮಹಿಷಿ, ಮತ್ತೊರ್ವ ಸಲಹೆಗಾರ ಹಾಗೂ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ: ಅಶ್ವಥ್‌ನಾರಾಯಣ್, ಆಯೋಗದ ಇಬ್ಬರು ಪ್ರತಿಜ್ಞಾ ಬೋಧನಾ ಆಯುಕ್ತರು (Oath Commissioners) ಪೊಲೀಸ್ ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ಮಹಾ ಧರ್ಮಾಧ್ಯಕ್ಷ ಡಾ: ಬರ್ನಾಡ್ ಮೊರಾಸ್ ಅವರು ಚರ್ಚ್‌ನ ದಾಳಿ ಕುರಿತಂತೆ ಸತ್ಯ ಹೊರಗೆಡವಲು ನ್ಯಾಯಾಂಗ ವಿಚಾರಣೆಗೆ ಆದೇಶಿಸಿರುವುದು ಜಾತ್ಯಾತೀತ ನಿಲುವಿಗೆ ಬದ್ದವಾಗಿ ಸರ್ಕಾರ ಸಹಕಾರ ನೀಡುತ್ತಿದೆ ಎಂಬುದಕ್ಕೆ ದ್ಯೋತಕ ಎಂದು ಬಣ್ಣಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X