ಛತ್ತೀಸ್ ಗಢದಲ್ಲಿ ಸತಿಸಹಗಮನಕ್ಕೆ ಮಹಿಳೆ ಬಲಿ
ರಾಯ್ ಪುರ, ಅ.13: ಛತ್ತೀಸ್ ಗಢದ ಗ್ರಾಮವೊಂದರಲ್ಲಿ ಸತಿಸಹಗಮನ ಪದ್ಧತಿಗೆ ವೃದ್ಧ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ರಾಯ್ ಪುರದಿಂದ 125 ಕಿ.ಮೀ ದೂರದಲ್ಲಿರುವ ಚಚರ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಗ್ರಾಮದ ನಿವಾಸಿ ಶಿವನಂದ ವರ್ಮಾ(80) ಶನಿವಾರ ಮಧ್ಯಾಹ್ನ ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟರು. ಈ ಘಟನೆಯಿಂದ ಮನನೊಂದ ಶಿವನಂದರ ಪತ್ನಿ ಲಾಲ್ ಮತಿ(75) ಪತಿಯೊಂದಿಗೆ ಚಿತೆಯೇರಲು ಸತಿಸಹಗಮನ ಮಾಡಿಕೊಳ್ಳಲು ನಿಶ್ಚಿಯಿಸಿದರು. ಶನಿವಾರ ರಾತ್ರಿ 7 ಗಂಟೆ ಸಮಯದಲ್ಲಿ ಗ್ರಾಮಸ್ಥರು ವರ್ಮಾ ಅಂತ್ಯಕ್ರಿಯೆಗಳನ್ನು ನೆರವೇರಿಸಿದರು. ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಎಲ್ಲರೂ ಸ್ಮಶಾಣದಿಂದ ಹೊರನಡೆದರು.
ಈ ಸಮಯಕ್ಕಾಗಿಯೇ ಕಾಯುತ್ತಿದ್ದ ಲಾಲ್ ಮತಿ ಗ್ರಾಮಸ್ಥರು ಅತ್ತ ಹೋಗುತ್ತಿದ್ದಂತೆ ಪತಿಯ ಚಿತೆಗೆ ಧುಮುಕಿ ಅಗ್ನಿಗೆ ಆಹುತಿಯಾದರು. ಸ್ಮಶಾಣದಿಂದ ಹಿಂತಿರುಗುತ್ತಿದ್ದ ಗ್ರಾಮಸ್ಥರು ಲಾಲ್ ಮತಿ ಜೊತೆಯಲ್ಲಿ ಇಲ್ಲದ್ದನ್ನು ಕಂಡು ಆಕೆಗಾಗಿ ಹುಡುಕಾಡಿದರು. ಕಡೆಗೆ ಲಾಲ್ ಮತಿ ದೇಹದ ಅವಶೇಷಗಳು ಶಿವಂದನ್ ವರ್ಮಾರ ಚಿತಾಭಸ್ಮದಲ್ಲಿ ಪತ್ತೆಯಾದವು.
ಈ ವಿಷಯ ಹಬ್ಬುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಸ್ಮಶಾಣಕ್ಕೆ ಆಗಮಿಸಿ ಲಾಲ್ ಮತಿಗೆ ಪ್ರಾರ್ಥನೆ ಸಲ್ಲಿಸಿದರು. ಮೂರು ವರ್ಷಗಳ ಹಿಂದೆ ಇದೇ ರೀತಿ ಮಹಿಳೆಯೊಬ್ಬರು ಸತಿಸಹಗಮನ ಮಾಡಿ ತಮ್ಮ ದೇಹವನ್ನು ಅಗ್ನಿಗೆ ಅರ್ಪಿಸಿಕೊಂಡಿದ್ದರು. ಆಕೆಗಾಗಿ ಗ್ರಾಮಸ್ಥರು ಗುಡಿ ಸಹ ಕಟ್ಟಿಸಿದ್ದರು.
(ಏಜೆನ್ಸೀಸ್)












Click it and Unblock the Notifications