ಹಿರಿಯ ನಾಗರಿಕರ ರಕ್ಷಣೆಗೆ ಬದ್ಧ : ಯಡಿಯೂರಪ್ಪ
ಬೆಂಗಳೂರು, ಅ. 1 : ಹಿರಿಯರಿಗೆ ನಮಸ್ಕಾರ. ಕಿರಿಯರು ದಾರಿತಪ್ಪದಂತೆ ಕೈಹಿಡಿದು ಮುನ್ನಡೆಸುವ ಹಿರಿಯ ನಾಗರಿಕರನ್ನು ಇಂದು ನಮಿಸುವ ದಿನ. ಬಾಳಿನ ಸಂಧ್ಯಾಕಾಲದಲ್ಲಿ ಕತ್ತಲಲ್ಲಿ ಬೆಳಕಾಗಿ, ಬಾಗಿರುವವರಿಗೆ ಊರುಗೋಲಾಗಿ, ಅಭದ್ರ ಜೀವನಕ್ಕೆ ಭದ್ರತೆ ಒದಗಿಸಲು ಸಂಕಲ್ಪ ತೊಡುವ ಸುದಿನ.
ನಿರ್ಗತಿಕ ಹಿರಿಯರ ಯೋಗಕ್ಷೇಮ, ಕಲ್ಯಾಣ, ಭದ್ರತೆ ಕುರಿತಂತೆ ನಾನಾ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಹಿರಿಯ ನಾಗರಿಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ ರೂಪಿಸಿದ ಹಿರಿಯ ನಾಗರಿಕರ ಕಲ್ಯಾಣ ಹಾಗೂ ನಿರ್ವಹಣೆಯ ಕಾಯ್ದೆ 2008 ಅನ್ವಯ ಕರಡು ನಿಯಮಾವಳಿಗಳನ್ನು ರೂಪಿಸಿ ಕಾನೂನು ಇಲಾಖೆಗೆ ಅನುಮೋದನೆಗಾಗಿ ಕಳುಹಿಸಿದೆ.
ಮುಖ್ಯಮಂತ್ರಿ ಉದ್ಘಾಟನೆ : ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಳಿಗ್ಗೆ ಉದ್ಪಾಟಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಪಿ. ಎಂ. ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಲೋಕಸಭಾ ಸದಸ್ಯ ಅನಂತಕುಮಾರ್, ಸಾರಿಗೆ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಚಂದ್ರಶೇಖರ ಕಂಬಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ನ್ಯಾಯಮೂರ್ತಿ ಡಾ. ರಾಮಾಜೋಯಿಸ್ (ಕಾನೂನು ಕ್ಷೇತ್ರ), ಡಾ. ಎಂ. ಚಿದಾನಂದಮೂರ್ತಿ (ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರ), ಎಂ. ಲೀಲಾವತಿ (ಕಲಾಕ್ಷೇತ್ರ), ಕೆಳದಿ ಗುಂಡಾ ಜೋಯಿಸ್ (ಶೈಕ್ಷಣಿಕ ಕ್ಷೇತ್ರ), ಸರೋಜಾ ಬಾನಪ್ಪ (ಸಮಾಜಸೇವಾ ಕ್ಷೇತ್ರ), ಡಿ.ಎಚ್. ಗುರು (ಕ್ರೀಡಾ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9 ಗಂಟೆಗೆ ಎಂ.ಜಿ. ರಸ್ತೆಯಿಂದ ವಿಧಾನ ಸೌಧದವರೆಗೆ 'ವಾಕತಾನ್ ' ಕಾರ್ಯಕ್ರಮ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಹಿರಿಯ ನಾಗರಿಕರ ಯೋಜನೆಗಳ ವಿವರ
ಕೇಂದ್ರ ಕಾಯ್ದೆಯ ನೆಲೆಗಟ್ಟಿನಲ್ಲಿ ಹಿರಿಯ ನಾಗರಿಕರಿಗಾಗಿ ರಾಜ್ಯ ನೀತಿಯನ್ನು ರೂಪಿಸಿ ಸಂಭವಿಸಬಹುದಾದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ನಿರ್ದೇಶಕ ಎಚ್. ಚಿತ್ತರಂಜನ್ ತಿಳಿಸಿದರು.
ರಾಜ್ಯ ನೀತಿಯ ಸಮರ್ಪಕ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಹಿರಿಯ ನಾಗರಿಕರಿಗೆ ಆರೋಗ್ಯ, ಆರ್ಥಿಕ ಭದ್ರತೆ, ವಸತಿ ಮತ್ತು ಆಶ್ರಯ, ಜೀವ ಹಾಗೂ ಆಸ್ತಿ ರಕ್ಷಣೆ ಮತ್ತು ಸಮಗ್ರ ಕ್ಷೇಮ ಕಾಪಾಡುವುದು ಈ ನೀತಿಯ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು. ಸರ್ಕಾರವು ಹಿರಿಯ ನಾಗರಿಕರಿಗಾಗಿ 4 ಹಗಲು ಯೋಗಕ್ಷೇಮ ಕೇಂದ್ರಗಳು, 15 ಜಿಲ್ಲೆಗಳಲ್ಲಿ ಸಹಾಯವಾಣಿ ಕೇಂದ್ರಗಳು, ಸಂಚಾರಿ ಮೆಡಿಕೇರ್ ಘಟಕ ಹಾಗೂ 6 ಜಿಲ್ಲಾ ಆಸ್ಪತ್ರೆಗಳಲ್ಲಿ ಜೆರಿಯಾಟ್ರಿಕ್ ಸೆಂಟರ್ ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಅನುದಾನದಡಿ 27 ಜಿಲ್ಲೆಗಳಲ್ಲಿ ತಲಾ ಒಂದು ವೃದ್ಧಾಶ್ರಮವನ್ನು ಸ್ಥಾಪಿಸಿ, ಅಲ್ಲಿ ಆಹಾರ, ಆಶ್ರಯ, ಆರೋಗ್ಯ ರಕ್ಷಣೆ ಒದಗಿಸಲಾಗುತ್ತಿದೆ. ಪ್ರತಿಯೊಂದು ವೃದ್ಧಾಶ್ರಮದಲ್ಲಿ 25 ವೃದ್ಧರಿಗೆ ಆಶ್ರಯ ಕಲ್ಪಿಸಲಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ಅನುದಾನದಡಿ 54 ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ಬಡತನ ರೇಖೆಗಿಂತ ಕೆಳಗಿರುವ ಹಾಗೂ 65 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ರೂ. 400 ಮಾಸಾಶನ ನೀಡಲಾಗುತ್ತಿದೆ. ಇದಲ್ಲದೆ ಸಂಧ್ಯಾ ಸುರಕ್ಷಾ ಯೋಜನೆಯಡಿ ವಾರ್ಷಿಕ 20 ಸಾವಿರಕ್ಕಿಂತ ಕಡಿಮೆ ಆದಾಯವಿರುವ ಹಿರಿಯ ನಾಗರಿಕರಿಗೆ ರೂ. 400 ಮಾಸಾಶನವನ್ನು ಕಂದಾಯ ಇಲಾಖೆಯ ಮೂಲಕ ನೀಡಲಾಗುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದ್ದು ಈಗಾಗಲೇ 1 ಲಕ್ಷ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿನ ದರಗಳಲ್ಲಿ ಹಿರಿಯ ನಾಗರಿಕರಿಗೆ ಶೇ. 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ನಿರ್ದೇಶಕರು ತಿಳಿಸಿದರು.












Click it and Unblock the Notifications