ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವರ ಇಂಗ್ಲಿಷ್ ವ್ಯಾಮೋಹಕ್ಕೇ ಏನನ್ನೋಣ?

By Staff
|
Google Oneindia Kannada News

Yeddyurappa chats with cnr raoಬೆಂಗಳೂರು, ಸೆ.11: ವಿಜ್ಞಾನಕ್ಕೂ ಇಂಗ್ಲಿಷ್ ಗೂ ಪ್ರಬಲ ನಂಟು. ಹೀಗಾಗಿ ವಿಜ್ಞಾನಿಗಳು ಇಂಗ್ಲಿಷ್ ನಲ್ಲಿ ಮಾತನಾಡಿದರೆ ಅಚ್ಚರಿಯೇನಿಲ್ಲ. ಆದರೆ ಅವರು ಕನ್ನಡದಲ್ಲಿ ಮಾತನಾಡಿ ಅಭಿಮಾನ ತೋರಿದ ವೇದಿಕೆಯಲ್ಲೇ ರಾಜ್ಯದ ಸಚಿವರು ಇಂಗ್ಲಿಷ್ ನಲ್ಲಿ ಮಾತನಾಡಿದರೆ...?

ಇದು ನಡೆದದ್ದು ಭಾರತೀಯ ವಿಜ್ಞಾನ ಮಂದಿರಕ್ಕೆ ಸೇರಿದ ಟಾಟಾ ಸಭಾಂಗಣದಲ್ಲಿ. ಬುಧವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್, ಕಲ್ಯಾ ಜಗನ್ನಾಥರಾವ್ ಅಚ್ಚ ಕನ್ನಡದಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಅವರನ್ನು ಅನುಸರಿಸಿದರು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಆಸ್ನೋಟಿಕರ್ ಮಾತ್ರ ಇಂಗ್ಲಿಷ್ ನಲ್ಲಿ ಭಾಷಣ ಮಾಡಿ 'ಪಾಂಡಿತ್ಯ ' ಮೆರೆದರು.

ಕನ್ನಡದ ಕಳಕಳಿ
ಸಿಎನ್ ಆರ್ ರಾವ್ ಮಾತನಾಡಿ, ''ಬೆಂಗಳೂರಿನಲ್ಲಿ ಕನ್ನಡ ಮಾಯವಾಗುತ್ತಿದೆ. ನಮ್ಮ ಯುವಕರಲ್ಲಿ ಪ್ರತಿಭೆ ಅಡಗಿದೆ. ಹಿಂದೆಯೂ ಕರ್ನಾಟಕ ಜ್ಞಾನ ಸಂಪಾದನೆಯಲ್ಲಿ ಮುಂದಿತ್ತು. ಬಡತನವೂ ಅದಕ್ಕೆ ಅಡ್ಡಿಯಾಗಿರಲಿಲ್ಲ. ಎಲ್ಲ ರಂಗಗಳಲ್ಲಿ ನಮ್ಮ ರಾಜ್ಯ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಬೇಕು'' ಎಂದರು.

ಕಲ್ಯಾ ಜಗನ್ನಾಥರಾವ್ ಅವರೂ ಕನ್ನಡದಲ್ಲಿ ಅರಳು ಹುರಿದಂತೆ ಮಾತನಾಡಿದರಲ್ಲದೆ, ವಿಜ್ಞಾನಿಗಳಿಗೆ ಇರುವ ಸಾಮಾಜಿಕ ಕಳಕಳಿಯ ಬಗ್ಗೆ ಮನಸ್ಸಿಗೆ ತಟ್ಟುವಂತೆ ವಿವರಿಸಿದರು. ''ರಾಜ್ಯದ ಅಭಿವೃದ್ಧಿಯಲ್ಲಿ ನಮಗೂ ಅವಕಾಶ ಕೊಡಿ, ಹೊರಗಿನವರ ಬಗ್ಗೆ ಔದಾರ್ಯ ತೋರಿಸಿದ್ದೇವೆ. ಇದು ನಮ್ಮ ಗುಣ ಇರಬಹುದು. ಆದರೆ ಸ್ಥಳೀಯ ವಿಜ್ಞಾನಿಗಳ ಪ್ರತಿಭೆಯನ್ನು ಬಳಸಿಕೊಳ್ಳುವುದು ಸರಕಾರದ ಕರ್ತವ್ಯ'' ಎಂದು ಹೇಳಿದರು.

'ಪ್ರೊ.ಸಿಎನ್ ಆರ್ ರಾವ್ ಸೇವೆ ಬಳಸಿಕೊಳ್ಳಲು ಅವರನ್ನು ವಿಷನ್ ಗ್ರೂಪ್ ಅಧ್ಯಕ್ಷರಾಗಿ ನೇಮಿಸಲಾಗಿದೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಆಸ್ನೋಟಿಕರ್ ಮಾತನಾಡಿ, ವಿಜ್ಞಾನಿಗಳು ಸರಕಾರಕ್ಕೆ ಮಾರ್ಗದರ್ಶನ ನೀಡಬೇಕೆಂದರು.

ವಿಜ್ಞಾನಿಗಳಿಗೆ ಕನ್ನಡದ ಅಭಿಮಾನ ಇರುವುದಿಲ್ಲ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಈ ಸಮಾರಂಭದಲ್ಲಿ ವಿಜ್ಞಾನಿಗಳು ತೋರಿಸಿದ ಕನ್ನಡದ ಮೇಲಿನ ಅಭಿಮಾನ ಅಪೂರ್ವ. ಬೆಂಗಳೂರಿನಲ್ಲಿ ಕನ್ನಡ ಮರೆಯಾಗುತ್ತಿರುವುದು ಹಾಗೂ ಕನ್ನಡ ವಿಜ್ಞಾನಿಗಳಿಗೆ ಮನ್ನಣೆ ದೊರೆಯದೇ ಇರುವುದನ್ನು ವಿಜ್ಞಾನಿಗಳು ಸರಕಾರದ ಗಮನಕ್ಕೆ ತಂದರು.

(ಸ್ನೇಹಸೇತು: ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X