ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಧನ ಮಾಧ್ಯಮ ಬದಲಾವಣೆ ಅರ್ಜಿ ತಿರಸ್ಕೃತ

By Staff
|
Google Oneindia Kannada News

ಬೆಂಗಳೂರು, ಸೆ. 11 : ಇಷ್ಟು ದಿನ ಸುಮ್ಮನಿದ್ದ ಕಂಗ್ಲಿಷ್ ಶಾಲೆಗಳು ಶೈಕ್ಷಣಿಕ ವರ್ಷದ ಕೊನೆಯಲ್ಲಿ ಕ್ಯಾತೆ ತೆಗೆದಿವೆ. ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡಲು ಅವಕಾಶ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿವೆ. ಆದರೆ ಕೋರ್ಟ್ ''ಇಂಗ್ಲಿಷ್ ಮಾಧ್ಯಮ ಏನಿದ್ದರೂ 2009-10ನೇ ಶೈಕ್ಷಣಿಕ ವರ್ಷಕ್ಕೆ ಮೀಸಲು. ನೀವೇನಿದ್ದರೂ ಮುಂದಿನ ವರ್ಷ ಅರ್ಜಿ ಸಲ್ಲಿಸಿ ಎಂದು ಹೈಕೋರ್ಟ್ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸ್ಪಷ್ಟವಾಗಿ ನಿರ್ದೇಶನ ನೀಡಿದೆ.

ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಇಚ್ಛೆ ಇಲ್ಲದ ನೂರಾರು ಶಿಕ್ಷಣ ಸಂಸ್ಥೆಗಳು, 2008-09 ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ತಮಗೆ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುವ ಅವಕಾಶ ದೊರೆಯಬಹುದು ಎಂಬ ಆಸೆಯಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಲೇ ಇವೆ. ಪ್ರಸಕ್ತ ಶೈಕ್ಷಣಿಕ ವರ್ಷ ಮುಕ್ಕಾಲು ಭಾಗ ಮುಗಿದಿದ್ದರೂ, ಇದೇ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿ ನಡೆಸಲು ಅನುಮತಿ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದ 45ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಬುಧವಾರ ಬರಿಗೈಯಲ್ಲಿ ವಾಪಸ್ಸಾಗಿವೆ. ಇವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ತಿರಸ್ಕರಿಸಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುವ ಆಸೆ ಇದ್ದರೆ ಅದಕ್ಕೆ ಕೋರಿ ಮುಂದಿನ ವರ್ಷವಷ್ಟೇ ಹೊಸದಾಗಿ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಶಿಕ್ಷಣ ಸಂಸ್ಥೆಗಳಿಗೆ ಬುದ್ಧಿಮಾತು ಹೇಳಿದ್ದಾರೆ. ಈ ಕೋರಿಕೆ ಇಟ್ಟು ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದರೆ ಅದನ್ನು ಪರಿಗಣಿಸಿ ಕಾನೂನುನಡಿ ಮುಂದಿನ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಇದೇ ವೇಳೆ ನಿರ್ದೇಶನ ನೀಡಿದ್ದಾರೆ.

ರಾಜ್ಯ ಸರ್ಕಾರದಿಂದ ಅನುದಾನ ಪಡೆಯದ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡಬೇಕು ಎನ್ನುವುದು ಸಂವಿಧಾನ ಬಾಹಿರ ಎಂದು ಹೈಕೋರ್ಟ್ ಪೂರ್ಣಪೀಠ ಕಳೆದ ಜುಲೈ 2 ರಂದು ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಇವೆಲ್ಲ ಶಾಲೆಗಳು ಇದೇ ಸಾಲಿನಲ್ಲಿಯೇ ಇಂಗ್ಲಿಷ್ ಮಾಧ್ಯಮ ಬೋಧಿಸಲು ಮುಂದಾಗಿವೆ.

ಇಂಗ್ಲಿಷ್ ಮಾಧ್ಯಮದಲ್ಲಿ ತರಬೇತಿ ನೀಡಲು ತಮಗೆ ಸಂವಿಧಾನವು ಹಕ್ಕು ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಅದನ್ನು ಅನ್ವಯ ಮಾಡುವುದು ಸಂವಿಧಾನ ಬಾಹಿರ ಆಗಲಾರದು ಎಂದು ಶಿಕ್ಷಣ ಸಂಸ್ಥೆಗಳು ವಾದಿಸಿದ್ದವು. ನಿಮಗೆ ಸಂವಿಧಾನ ಹಕ್ಕು ನೀಡಿರಬಹುದು. ಆದರೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ರೀತಿ ಬದಲಾವಣೆ ಮಾಡಿ ಮಕ್ಕಳನ್ನು ಸಂಕಷ್ಟಕ್ಕೆ ನೂಕಿ ಎಂದು ಯಾವ ಸಂವಿಧಾನವೂ ಹೇಳುವುದಿಲ್ಲ ಎಂದು ಹೈಕೋರ್ಟ್ ಬುದ್ಧಿಮಾತು ಹೇಳಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X