ಅವಿರತದಿಂದ ತೇಜಸ್ವಿ ಅವರಿಗೆ ವೈವಿಧ್ಯಪೂರ್ಣ ನಮನ

Posted By: Super
Subscribe to Oneindia Kannada

ತೇಜಸ್ವಿ ಅವರ ವೈವಿಧ್ಯಪೂರ್ಣ ಬದುಕಿನ ತುಣುಕಷ್ಟೇ ಜನರಿಗೆ ನೀಡಲು ನಮ್ಮಿಂದ ಸಾಧ್ಯವಾಯ್ತು. ಮಹಾನ್ ಸಾಹಿತಿಯ ಬಗ್ಗೆ ನಿರಂತರವಾಗಿ ಜನರಿಗೆ ಅರಿವು ಮೂಡಿಸಲಾಗುವುದು. ಈ ನಿಟ್ಟಿನಲ್ಲಿ ತೇಜಸ್ವಿ ಅವರ ಪರಿಸರ ಹಾಗೂ ಕೃತಿಗಳ ಬಗ್ಗೆ ಪರಿಚಯಾತ್ಮಕ ವಿಡಿಯೋ ಚಿತ್ರೀಕರಣ ಮಾಡಲು ನಮ್ಮ ಟ್ರಸ್ಟ್ ಉದ್ದೇಶಿಸಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು, ನಾಡು ನುಡಿ ಹಾಗೂ ಪರಿಸರಕ್ಕಾಗಿ ಏನಾದರೂ ಒಳ್ಳೆಯದು ಮಾಡಬೇಕೆಂಬುದು ನಮ್ಮ ಆಶಯ ಎಂದು ಅವಿರತ ಟ್ರಸ್ಟ್ ನ ಅಧ್ಯಕ್ಷ ಕೆ.ಟಿ .ಸತೀಶ್ ಗೌಡ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದರು.

ಇತ್ತೀಚೆಗೆ ನಗರದಲ್ಲಿ ತೇಜಸ್ವಿ -70 ನುಡಿ ನಮನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಈ ಮಾತುಗಳನ್ನು ಸತೀಶ್ ಆಡಿದರು. ಕಾರ್ಯಕ್ರಮದಂದು ವೇದಿಕೆ ಏರಲು ಸಂಕೋಚ ಪಡುತ್ತಿದ್ದ ಅವರು, ಅಂದು ಸಿಕ್ಕ ಜನ ಬೆಂಬಲ ಹಾಗೂ ಸಹೃದಯರ ಸಹಕಾರದಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಅತಿಥಿಗಳು
ನಾಟಕಕಾರ ಡಾ. ಕೆ.ವೈ. ನಾರಾಯಣ ಸ್ವಾಮಿ, ತೊ. ನಂಜುಂಡಸ್ವಾಮಿ, ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಹಾಗೂ ಅಗ್ನಿ ಪತ್ರಿಕೆಯ ಪತ್ರಕರ್ತ ಮಂಜುನಾಥ ಅದ್ದೆ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಿಕ್ಷಣ ಹಾಗೂ ಇಪ್ಪನೇ ಶತಮಾನದ ಅವನತಿ ಹಾಗೂ ಎಚ್ಚರಿಕೆಯ ಬಗ್ಗೆ ತೇಜಸ್ವಿ ಅವರ ಕಳಕಳಿಯನ್ನು ತೊ. ನಂಜುಂಡಸ್ವಾಮಿ ಅವರು ವಿಷದಪಡಿಸಿದರು. ನಟ ಸುಚೇಂದ್ರ ಪ್ರಸಾದ್ ಅವರು ತೇಜಸ್ವಿ ಅವರ ಮಾನವೀಯ ಗುಣಗಳು, ಸರಳತೆಯ ಪರಿಚಯ ಮಾಡಿಕೊಟ್ಟರು. ಅಗ್ನಿ ಪತ್ರಿಕೆಯ ಮಂಜುನಾಥ ಅದ್ದೆ ಅವರು ತೇಜಸ್ವಿ ಅವರೊಂದಿಗಿನ ಒಡನಾಟವನ್ನು ನೆನೆದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ರಾಜೀವ್ ಅವರು ಅಚ್ಚುಕಟ್ಟಾಗಿ ಮಾಡಿದರು.

Aviratha celebrates writer poornachandra tejaswi's

ಕನ್ನಡ ಗ್ರೀಟಿಂಗ್ ಕಾರ್ಡ್ಸ್
ಪಿ. ಮಹಮ್ಮದ್ ಹಾಗೂ ಗುಜ್ಜಾರ್ ಅವರು ರಚಿಸಿರುವ ತೇಜಸ್ವಿ ಕುರಿತ ವ್ಯಂಗ್ಯ ಚಿತ್ರಗಳನ್ನು ಜಿ.ಎನ್ ಮೋಹನ್ ಅವರ ಮೇ ಫ್ಲವರ್ ಮೀಡಿಯಾ ಸಂಸ್ಥೆ ಹಾಗೂ ಅವಧಿ. ವರ್ಲ್ಡ್ ಪ್ರೆಸ್. ಕಾಂ ಅವರು ಗ್ರೀಟಿಂಗ್ ರೂಪದಲ್ಲಿ ತಯಾರಿಸಿದ್ದಾರೆ. ಇದರ ಜತೆಗೆ ತೇಜಸ್ವಿ ಅವರು ತೆಗೆದ ಹಕ್ಕಿಗಳ ಚಿತ್ರಗಳಿಗೆ ಕುವೆಂಪು ಅವರ ನುಡಿಪಂಕ್ತಿಗಳನ್ನು ಪೋಣಿಸಿ ಸುಂದರ ಶುಭಾಶಯ ಪತ್ರಗಳನ್ನು ರೂಪಿಸಲಾಗಿದೆ. ಈ ಶುಭಾಶಯ ಪತ್ರಗಳ ಅನಾವರಣ ಕಾರ್ಯಕ್ರಮವನ್ನು ಸಹಾ ನೆರವೇರಿಸಲಾಯಿತು.

ಗೀತಗಾಯನ ಹಾಗೂ ಕಥಾ ಕನವರಿಕೆ
ವಿ.ಶ್ರೀನಿವಾಸ್ ಹಾಗೂ ಅರ್ಚನಾ ರವಿ ಅವರ ತಂಡದಿಂದ ಕುವೆಂಪು ಗೀತಗಾಯನವಿತ್ತು. ಕಾರ್ಯಕ್ರಮದಲ್ಲಿ ವೈವಿಧ್ಯತೆಯಿರಲಿ ಎಂದು ಇದನ್ನು ಸೇರಿಸಲಾಯಿತು. ನಂತರ ನಡೆದ ಕಥಾ ಕನವರಿಕೆ(ತೇಜಸ್ವಿ ಕಥೆಗಳಲ್ಲಿ ಬರುವ ಹಾಸ್ಯ ಪ್ರಸಂಗಗಳ ವಾಚನ) ವಿಡಿಯೋ ಪ್ರಸಾರ ನಾವು ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಮೂಡಿ ಬಂತು. ಕರ್ವಾಲೋ, ಕೃಷ್ಣೇಗೌಡನ ಆನೆ ಕಥೆಯಿಂದ ಕೆಲವು ಪ್ರಸಂಗಗಳನ್ನು ಆರಿಸಲಾಗಿತ್ತು. ಇದಲ್ಲದೆ ಕಟ್ಟೆ ಪುರಾಣ ಖ್ಯಾತಿ ಬಿ ಚಂದ್ರೇಗೌಡ ಅವರಿಂದ ತೇಜಸ್ವಿ ಅವರ ವ್ಯಕ್ತಿತ್ವದ ಪರಿಚಯಾತ್ಮಕ ಧ್ವನಿ ಮುದ್ರಣವನ್ನೂ ಕೇಳಿಸಲಾಯಿತು. ಈ ರೀತಿಯ ವಿಡಿಯೋ ಚಿತ್ರಣವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಮಾಡುವ ಯೋಜನೆಯಿದೆ ಎಂದು ಸತೀಶ್ ಹೇಳಿದರು.

ಕಾರ್ಯಕ್ರಮದ ಆಕರ್ಷಣೆ:
ರೂಪಾಂತರ ತಂಡದಿಂದ ಅ.ನಾ. ರಾವ್ ಜಾಧವ್ ಅವರ ನಿರ್ದೇಶನದಲ್ಲಿ ಕಿರಗೂರಿನ ಗಯ್ಯಾಳಿಗಳು ನಾಟಕವನ್ನು ಪ್ರದರ್ಶಿಸಲಾಯಿತು.ಈ ನಾಟಕದಲ್ಲಿ ಬರುವ ಗ್ರಾಮೀಣ ಪ್ರದೇಶದ ಬೈಗುಳಗಳು, ಲಾಗ್ ಅಪ್ ನಲ್ಲಿ ಲಂಗೋಟಿ ಉಟ್ಟ ಹಳ್ಳಿಗರನ್ನು ನೋಡಲು ಜನ ಮುಜುಗರ ಪಡಬಹುದು ದಯವಿಟ್ಟು ಎಡಿಟ್ ಮಾಡಿ ನೋಡಿ ಎಂದು ನಿರ್ದೇಶಕರಾದ ಕೆಎಸ್ ಡಿ ಎಲ್ ಚಂದ್ರು ಅವರನ್ನು ಕೇಳಿದೆ. ಆದರೆ, ಕಥೆಗೆ ಪೂರಕವಾದ ಸಂಭಾಷಣೆ ಹಾಗೂ ದೃಶ್ಯಗಳಿರುವುದರಿಂದ ಎಲ್ಲೂ ಆಭಾಸ ಎನಿಸುವುದಿಲ್ಲ. ನಗರ ವಾಸಿಗಳಿಗೆ ಹಳ್ಳಿಗರ ಮುಗ್ಧತೆಯ ಜತೆಗೆ ಗಯ್ಯಾಳಿತನವೂ ತಿಳಿಯುತ್ತದೆ ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು. ಅದರಂತೆ, ಜನರು ನಾಟಕವನ್ನು ಮೆಚ್ಚಿ, ಹೊಗಳಿದ್ದು ಖುಷಿಕೊಟ್ಟಿದೆ ಎಂದರು..

ಕಲಾಕ್ಷೇತ್ರದ ಅವ್ಯವಸ್ಥೆ
ನಗರದ ದಕ್ಷಿಣ ಭಾಗವಲ್ಲದೆ ಬೇರೆಡೆಯಲ್ಲೂ ಕಾರ್ಯಕ್ರಮ ಮಾಡಬೇಕೆಂಬ ಉದ್ದೇಶದಿಂದ ರಾಜಾಜಿನಗರ ಡಾ. ರಾಜ್ ಕುಮಾರ್ ಕಲಾಕ್ಷೇತ್ರವನ್ನು ಆಯ್ದುಕೊಂಡೆವು. ಆದರೆ ಅಲ್ಲಿ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿತ್ತು. ಅತಿಥಿಗಳಿಗೆ ಕುಳಿತುಕೊಳ್ಲಲು ವಿಶೇಷ ಆಸನ ವ್ಯವಸ್ಥೆ ಕೂಡ ಇರಲಿಲ್ಲ. ಇಲ್ಲಿನ ಸೌಕರ್ಯ ಕೊರತೆ ಹಾಗೂ ಕೆಲಸಗಾರರ ನಿರ್ಲಕ್ಷ್ಯದ ಬಗ್ಗೆ ರೂಪಾಂತರ ತಂಡ ಹಾಗೂ ಅವಿರತ ಟ್ರಸ್ಟ್ ಪಶ್ಚಿಮ ವಲಯ ಡಿಸಿ ಅವರಿಗೆ ದೂರು ನೀಡಲಿದೆ. ಆದರೆ, ಎಸಿ ಇಲ್ಲದೆ, ಫ್ಯಾನ್ ಇಲ್ಲದೆ,ಸೆಖೆಯಲ್ಲಿ 4 ರಿಂದ 9 :30ರವರೆಗೂ ಕೂತ ಪ್ರೇಕ್ಷಕರಿಗೆ ನಾನು ಋಣಿಯಾಗಿದ್ದೇನೆ. ಅಸಮರ್ಪಕ ವ್ಯವಸ್ಥೆಯ ಬಗ್ಗೆ ತಿಳಿದೂ ಕಾರ್ಯಕ್ರಮದ ಯಶಸ್ಸಾಗಲು ಸಹೃದಯ ಜನರೇ ಕಾರಣ. ದುಡ್ಡು ಕೊಟ್ಟು ಬಂದ ಜನಕ್ಕೆ ಮೋಸವಾಗಿಲ್ಲ ಎಂಬ ಹೆಮ್ಮೆಯಿದೆ ಎನ್ನುತ್ತಾರೆ ಸತೀಶ್ ಗೌಡ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Aviratha Trust celebrated writerpoornachandra tejaswi's birthday on sept 7. kiragoorina gayyaligalu play , kuvempu songs recital are the attraction

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ