ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷಗಿರಿಗೆ ಸಿದ್ದು ದೆಹಲಿಯಲ್ಲಿ ಕಸರತ್ತು

By Staff
|
Google Oneindia Kannada News

ನವದೆಹಲಿ, ಸೆ. 2 : ಹೈಕಮಾಂಡ್ ಬಯಸಿದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು (ಕೆಪಿಸಿಸಿ) ವಹಿಸಿಕೊಳ್ಳಲು ಸಿದ್ಧ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ. ಹೈಕಮಾಂಡ್ ಸಿದ್ದು ನೇಮಕಕ್ಕೆ ಒಲವು ತೋರಿಸಿದ್ದರಿಂದ ಅನೇಕ ದಿನಗಳಿಂದ ತೀವ್ರ ಹಗ್ಗಾಜಗ್ಗಾಟಕ್ಕೆ ಒಳಗಾಗಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ಪ್ರಕ್ರಿಯೆ ಬಹುತೇಕ ಕೊನೆಗೊಳ್ಳುವ ಲಕ್ಷಣಗಳು ಗೋಚರಿಸಿವೆ.

ಸೆಪ್ಟಂಬರ್ 1 ರಂದು ನವದೆಹಲಿಗೆ ಬರುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಸೋಮವಾರ ದಿನವಿಡೀ ಸೋನಿಯಾ ಅವರ ಭೇಟಿಗಾಗಿ ಕಾದ ಸಿದ್ದರಾಮಯ್ಯ ಅವರಿಗೆ ಕೊನೆಗೆ ಅವರನ್ನು ಭೇಟಿ ಮಾಡುವ ಅವಕಾಶ ಸಿಗಲಿಲ್ಲ. ಮಂಗಳವಾರ ಬೆಳಗ್ಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಸಿದ್ದು, ಸೋನಿಯ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ನೇಮಿಸಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಷರತ್ತು ವಿಧಿಸಿಲ್ಲ ಎಂದು ಅವರು ಹೇಳಿದರು. ಆದರೆ ಸೋನಿಯಾ ಗಾಂಧಿ ಅವರು ಈ ಸಂಬಂಧ ರಾಜ್ಯ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಬೇಕಾಗಿದೆ ಎಂದಷ್ಟೆ ಹೇಳಿ ಜಾರಿಕೊಂಡಿದ್ದಾರೆ. ಬುಧವಾರ ಇಲ್ಲವೇ ಗುರುವಾರ ಸಿದ್ದರಾಮಯ್ಯ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ಲೋಕಸಭೆ ಚುನಾವಣೆ ಹಾಗೂ ರಾಜ್ಯದ ಉಪ ಚುನಾವಣೆಗೆ ಸಮರ್ಥ ನಾಯಕನ ತಲಾಶೆಯಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್, ಸಿದ್ದು ಅಧ್ಯಕ್ಷ ಗಾದಿಯಲ್ಲಿ ಕುಳ್ಳರಿಸಿದರೆ ಪಕ್ಷಕ್ಕೆ ಹಿತಕೆ ಧಕ್ಕೆ ಉಂಟಾಗುವುದಿಲ್ಲ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಅವರೊಬ್ಬರಿಗೆ ಮಾತ್ರ ಇದೆ ಎನ್ನುವುದು ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಸಿದ್ದು ಅವರನ್ನು ಕೂರಿಸಲು ಸೋನಿಯಾ ಗಾಂಧಿ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲು ಹೈಕಮಂಡ್ ನಿರ್ಧರಿಸಿದ್ದು, ಆರ್.ವಿ.ದೇಶಪಾಂಡೆ ಅವರು ಹಿರಿಯ ಉಪಾಧ್ಯಕ್ಷರಾಗಿ ಅಥವಾ ಕಾರ್ಯಾಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ. ಇಲ್ಲವೇ ಇಬ್ಬರನ್ನೂ ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕ ಮಾಡಲು ಹೈಕಮಾಂಡ್ ಉದ್ದೇಶಿಸಿದೆ.

(ದಟ್ಸ್‌‍ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X