ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯ ಹೊಡೆತಕ್ಕೆ ಉ.ಕರ್ನಾಟಕದಲ್ಲಿ 6 ಸಾವು

By Staff
|
Google Oneindia Kannada News

ಬೆಂಗಳೂರು, ಆ. 4 : ಚುರುಕಾಗಿರುವ ಮುಂಗಾರು ಮಳೆ ಹೊಡೆತಕ್ಕೆ ಉತ್ತರ ಕರ್ನಾಟಕದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಆರು ಜನ ಅಸುನೀಗಿದ್ದಾರೆ.

ಭಾನುವಾರ ರಾತ್ರಿ ಸುರಿದ ಮಳೆಗೆ ಬೀದರ್ ಜಿಲ್ಲೆಯ ಖಾಡಬಿ ಗ್ರಾಮದಲ್ಲಿ ಮಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಅಸುನಿಗಿದ್ದಾರೆ. ಇನ್ನೊಂದು ಘಟನೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಸುಕಾಲಪೇಟ್ ಬಡಾವಣೆಯಲ್ಲಿ ಸೋಮವಾರ ಬೆಳಗಿನ ಜಾವದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಮನೆಮಂದಿಯೆಲ್ಲ ನಿದ್ದೆಯಲ್ಲಿರುವಾಗಲೇ ಮಕ್ಕಳನ್ನು ಚಿರನಿದ್ರೆಗೆ ಸೆಳೆದೊಯ್ದಿದ್ದಾನೆ ಮಳೆರಾಯ.

ಮಕ್ಕಳನ್ನು ಸಿದ್ದರಾಮೇಶ್ವರ (5), ಮಲ್ಲಿಕಾರ್ಜುನ (2) ಮತ್ತು ಲಕ್ಷ್ಮಿ (11) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚುರುಕಾದ ಮುಂಗಾರು : ತುಸು ಕ್ಷೀಣಿಸಿದ್ದ ಮುಂಗಾರು ಕರ್ನಾಟಕ ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮತ್ತೆ ಚುರುಕಾಗಿದೆ. ಮಡಿಕೇರಿಯಲ್ಲಿ ಭರ್ಜರಿ ಮಳೆ ಸುರಿಯುತ್ತಿದ್ದು, ಆಗುಂಬೆಯಲ್ಲಿ ಕಳೆದ 24 ಗಂಟೆಗಳಲ್ಲಿ 10 ಸೆಂ.ಮೀ. ಮಳೆಯಾಗಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು ಜೋಗದ ಜಲಪಾತ ಮತ್ತೆ ಮೈದುಂಬಿ ಧುಮ್ಮಿಕ್ಕುತ್ತಿದೆ. ಲಿಂಗನಮಕ್ಕಿಯಲ್ಲಿ 8 ಸೆಂ.ಮೀ. ಮಳೆಯಾದರೆ, ಗೇರುಸೊಪ್ಪದಲ್ಲಿ 7 ಸೆಂ.ಮೀ. ಮಳೆ ಸುರಿದಿದೆ.

ಮುನ್ನೆಚ್ಚರಿಕೆ : ದಕ್ಷಿಣ ಕನ್ನಡ ಮತ್ತು ಉತ್ತರ ಕರ್ನಾಟಕದಾದ್ಯಂತ ಉತ್ತಮ ಮಳೆ ಸುರಿಯುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿ, ದಕ್ಷಿಣ ಕನ್ನಡ, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಉತ್ತರ ಕರ್ನಾಟಕದ ಒಳನಾಡುಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾಯವ್ಯ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಅಭಿಮುಖವಾಗಿ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯುವ ಸಾಹಸಕ್ಕೆ ಮುಂದಾಗಬಾರದೆಂದು ಹವಾಮಾನ ಇಲಾಖೆ ಎಚ್ಚರಿಸಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X