ಜಮ್ಮು ಉದ್ವಿಗ್ನ; ಶ್ರೀನಗರ ಬಂದ್‌ಗೆ ಗಿಲಾನಿ ಕರೆ
ಜಮ್ಮು, ಆ.4 : ಅಮರನಾಥ್ ದೇವಾಲಯದ ಭೂವಿವಾದದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ತಿಂಗಳಿನಿಂದ ಇಲ್ಲಿನ ಅನೇಕ ಪ್ರದೇಶಗಳಲ್ಲಿ ನಿಷೇದಾಜ್ಞೆಯನ್ನು ಜಾರಿ ಮಾಡಲಾಗಿದೆ. ದೇವಾಲಯಕ್ಕೆ ನೀಡಿದ್ದ ಭೂಮಿ ಹಿಂಪಡೆದಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಅಮರನಾಥ್ ಸಂಘರ್ಷ ಸಮಿತಿ ಪ್ರತಿದಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತಿದೆ. ಪ್ರತಿಯಾಗಿ ಅಮರನಾಥ್ ದೇವಾಲಯಕ್ಕೆ ಭೂಮಿ ನೀಡಿರುವ ಕ್ರಮವನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಮರನಾಥ ಕ್ಷೇತ್ರ ರಣರಂಗವಾಗಿ ಜನಸಾಮಾನ್ಯರ ಬದುಕು ದುರ್ಭರವಾಗಿದೆ.
ಬಂದೇರ್‌ವಾ ಪ್ರದೇಶದಲ್ಲಿ ಕೋಮುಗಲಭೆ ಉಂಟಾದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ನಿಷೇದಾಜ್ಞೆ ಜಾರಿಯಲ್ಲಿದೆ. ಇದರ ಜತೆಗೆ ಐದು ನಗರಗಳಾದ ಜಮ್ಮು, ರಾಜೋರಿ, ಉದಮ್ ಪುರಗಳಲ್ಲಿ ಕಳೆದ ಒಂದು ತಿಂಗಳಿನಿಂದ ನಿಷೇಧಾಜ್ಞೆ ಹೇರಲಾಗಿದೆ. ಬಂದೇರ್‌ವಾ ಪ್ರದೇಶದಲ್ಲಿ ಗಲಭೆ ನಡೆದ ಕಾರಣ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಈ ಮಧ್ಯೆ ಸರ್ಕಾರದ ಕ್ರಮವನ್ನು ವಿರೋಧಿಸಿ ಜಮ್ಮು ಕಾಶ್ಮೀರ ಹುರಿಯತ್ ಮುಖಂಡ ಸಯ್ಯದ್ ಅಲೀ ಶಾ ಗಿಲಾನಿ ಇಂದು ಒಂದು ದಿನದ ಬಂದ್ ಕರೆ ನೀಡಿದ್ದಾರೆ. ಇದು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ಹಾಗೂ ಸೇನಾಪಡೆಯ ತುಕಡಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿವೆ. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗಲಾಮ್ ನಬಿ ಅಜಾದ್ ಅವರು ಹಿಂದುಗಳ ಪವಿತ್ರ ಕ್ಷೇತ್ರ ಅಮರನಾಥ್ ದೇವಾಲಯಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಅನುಕೂಲವಾಗಲೆಂದು ಸುಮಾರು 100 ಎಕರೆ ಸರ್ಕಾರಿ ಜಮೀನನ್ನು ದೇವಸ್ಥಾನದ ಟ್ರಸ್ಟ್ ಗೆ ನೀಡಿದ್ದರು. ಇದು ಭಾರಿ ವಿವಾದ ಹುಟ್ಟು ಹಾಕಿದ್ದೇ ಅಲ್ಲದೇ, ಅಲ್ಲಿಯ ಸರ್ಕಾರ ಉರುಳಲು ಕಾರಣವಾಯಿತು.
(ಏಜೆನ್ಸೀಸ್)
ಶ್ರೀನಗರ-ಅಮರನಾಥ್ ಹಾದಿಯಲ್ಲಿ ಸಜೀವ ಬಾಂಬ್
ಅಮರನಾಥ್ ದೇಗುಲ ವಿವಾದ ಮತ್ತೆ ನಿಷೇಧಾಜ್ಞೆ












Click it and Unblock the Notifications