ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು ಸಂಸದ ಡಿಸಿ ಶ್ರೀಕಂಠಪ್ಪ ನಿಧನ

By Staff
|
Google Oneindia Kannada News

MP D C Srikantappaಚಿಕ್ಕಮಗಳೂರು, ಆ. 04 : ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಿಜೆಪಿ ಹಾಲಿ ಸಂಸದ ಡಿ.ಸಿ.ಶ್ರೀಕಂಠಪ್ಪ(79) ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶಿವಮೊಗ್ಗದ ನಂಜಪ್ಪ ಕ್ಯಾನ್ಸರ್ ಆಸ್ಪತ್ರೆಯಿಂದ ಇತ್ತೀಚೆಗೆ ಬೀರೂರಿನ ತಮ್ಮ ನಿವಾಸಕ್ಕೆ ತೆರಳಿದ್ದರು. ಇಂದು ಹಠಾತ್ ಅಸ್ವಸ್ತರಾಗಿ ಚೇತರಿಸಿಕೊಳ್ಳಲಾಗದೆ ಅವರು ಜವರಾಯನಿಗೆ ಶರಣಾದರು.

ರಾಜಕೀಯದಲ್ಲಿ ಅಜಾತ ಶತ್ರು ಎಂದೇ ಗುರುತಿಸಿಕೊಂಡಿದ್ದ ಶ್ರೀಕಂಠಪ್ಪ, ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಮೂರು ಸಲ ಸಂಸದರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಪಕ್ಷದಲ್ಲಿದ್ದ ಶ್ರೀಕಂಠಪ್ಪ ಸರಳ ಸಜ್ಜನ ರಾಜಕಾರಣಿ ಎಂದೇ ಗುರುತಿಸಲ್ಪಟ್ಟಿದ್ದರು. ಪಕ್ಷಬೇಧ ಮರೆತು ಎಲ್ಲ ನಾಯಕರು ಅವರನ್ನು ಪ್ರೀತಿಸುತ್ತಿದ್ದರು.

'ಪ್ರಾಮಾಣಿಕತೆ, ನೈತಿಕತೆಗೆ ಇನ್ನೊಂದು ಹೆಸರೇ ಶ್ರೀಕಂಠಪ್ಪ ಎನ್ನುವುದು ಅವರ ಸಹಪಾಠಿಗಳ ಮಾತಾಗಿದೆ. ಶ್ರೀಕಂಠಪ್ಪ ಅವರ ನಿಧನದ ಮೂಲಕ ರಾಜ್ಯ ರಾಜಕಾರಣ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಅಮೂಲ್ಯ ವ್ಯಕ್ತಿತ್ವದ ಸ್ನೇಹಮಯಿ, ಸಹೃದಯಿ ಹಿರಿಯರೊಬ್ಬರು ನಮ್ಮನ್ನು ಅಗಲಿದ್ದಾರೆ. ಇದು ತುಂಬಲಾರದ ನಷ್ಟ' ಎಂದು ಜೆಡಿಎಸ್ ಪಕ್ಷದ ವೈವಿ. ಎಸ್. ದತ್ತಾ ನೋವಿನಿಂದ ಹೇಳಿದರು.

ಶ್ರೀಕಂಠಪ್ಪ ಅವರು ಪತ್ನಿ ಲಲಿತಮ್ಮ, ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳನ್ನು ಅಗಲಿದ್ದಾರೆ. ಮೃತರು ಅಪಾರ ಬಂಧು ಬಳಗ, ಅಭಿಮಾನಿ ಶಿಷ್ಯಬಳಗ, ರಾಜಕೀಯ ಸ್ನೇಹಿತರನ್ನು ಹೊಂದಿದ್ದಾರೆ. ಅವರ ಇಚ್ಛೆಯಂತೆ ತವರು ನೆಲದಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ ಎಂದು ಕುಟುಂಬದವರು ತಿಳಿಸಿದರು.

ಅನಾರೋಗ್ಯ ಕಾರಣದಿಂದ ಇತ್ತೀಚಿನ ಕೇಂದ್ರ ಸರ್ಕಾರದ ವಿಶ್ವಾಸಮತ ಪ್ರದರ್ಶನದ ಸಂದರ್ಭದಲ್ಲಿ ಅವರ ಗೈರುಹಾಜರಾಗಿದ್ದರು. ಆದರೆ ಸ್ಥಳೀಯ ನಗರಸಭೆ ಚುನಾವಣೆ ಕುತೂಹಲ ಘಟ್ಟ ತಲುಪಿದ್ದಾಗ, ಅನಾರೋಗ್ಯದ ನಡುವೆಯೂ ಬೆಂಗಳೂರಿನಿಂದ ಹಾರಿ ಬಂದ ಸಂಸದ ಶ್ರೀಕಂಠಪ್ಪ ಮತ ಚಲಾಯಿಸಿ, ಬಿಜೆಪಿಗೆ ನಗರ ಸಭೆಯ ಗದ್ದುಗೆ ದೊರೆಯುವಂತೆ ಮಾಡಿ ಇತಿಹಾಸ ಮೆರೆದಿದ್ದರು.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಂಸದ ಶ್ರೀಕಂಠಪ್ಪ ಅವರು, ಗಣಿ ದೊರೆ ಕೊಟ್ಟ ಹೆಲಿಕಾಪ್ಟರ್ ನೆರವಿನಿಂದ ಚಿಕ್ಕಮಗಳೂರಿಗೆ ತೆರಳಿ, ಸ್ಟ್ರೆಚರ್ ಮೇಲೆ ಮಲಗಿಕೊಂಡು, ವೈದ್ಯರ ಸಹಾಯದಿಂದ ಮತ ಚಲಾಯಿಸಿದ್ದು, ಅಭೂತಪೂರ್ವ ಎನ್ನಬಹುದು.ಇದರಿಂದ ಹೇಗಾದರೂ ಕಾಂಗ್ರೆಸ್ ಹಿಡಿತದಿಂದ ನಗರ ಸಭೆಯನ್ನು ವಶಪಡಿಸಿಕೊಳ್ಳಬೇಕೆಂಬ ಬಿಜೆಪಿಯ ಕನಸು ನನಸಾಯಿತು. ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿಯ ಇಂದಿನ ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿ ಅವರು ಮಾಡಿದ ಕೆಲಸ ಶ್ಲಾಘನೀಯ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X