ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೆರಡು ತಿಂಗಳು ಲೋಡ್ ಶೆಡ್ಡಿಂಗ್ ಜಾರಿ : ಈಶ್ವರಪ್ಪ

By Staff
|
Google Oneindia Kannada News

ಬೆಂಗಳೂರು, ಜು. 24 : ರಾಜ್ಯದಲ್ಲಿ ವಿದ್ಯುತ್ ಆಭಾವ ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದವರೆಗೆ ಶೇ. 20 ರಷ್ಟು ಮತ್ತು ಆಗಸ್ಟ್ ತಿಂಗಳಲ್ಲಿ ಶೇ. 25 ರಷ್ಟು ಲೋಡ್ ಶೆಡ್ಡಿಂಗ್ ಮಾಡುವುದಾಗಿ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಬುಧವಾರ ವಿಧಾನಸಭೆಗೆ ತಿಳಿಸಿದರು.

ರಾಜ್ಯದಲ್ಲಿ ಮಳೆ ಆಭಾವದಿಂದ ಜಲಾಶಯಗಳ ಮಟ್ಟ ತೀವ್ರವಾಗಿ ಕುಸಿದಿದೆ. ಸದ್ಯದ ನೀರಿನ ಮಟ್ಟವನ್ನು ಗಣನೆಗೆ ತಗೆದುಕೊಂಡರೆ ದೈನಂದಿನ ವಿದ್ಯುತ್ ಬಳಕೆಯನ್ನು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುಮಾರು 100 ದಶಲಕ್ಷ ಯೂನಿಟ್ ಗಳಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಈ ವಿದ್ಯುತ್ತನ್ನು ಯಾವ ರೀತಿ ವಿತರಣೆ ಮಾಡಬೇಕು, ಎಷ್ಟು ಸಮಯ ಮತ್ತು ಯಾವ ಅವಧಿಯಲ್ಲಿ ಲೋಡ್ ಶೆಡ್ಡಿಂಗ್ ಮಾಡಬೇಕು ಎನ್ನುವುದರ ಬಗ್ಗೆ 2-3 ದಿನಗಳಲ್ಲಿ ತೀರ್ಮಾನಗೊಳಿಸಲಾಗುವುದು ಎಂದು ಹೇಳಿದರು. ವಿದ್ಯುತ್ ಪರಿಸ್ಥಿತಿ ಅವಲೋಕಿಸಲು ಸಂಪುಟ ಉಪಸಮಿತಿ ರಚಿಸಿದ್ದು, ಪ್ರತಿ 15 ದಿನಕ್ಕೊಮ್ಮೆ ಸಭೆ ಸೇರಲಿದ್ದು, ಮುಂಗಾರು ಚುರುಕುಗೊಂಡು ಜಲಾಶಯಗಳ ನೀರಿನ ಮಟ್ಟ ಸುಧಾರಿಸಿದರೆ ವಿದ್ಯುತ್ ಉತ್ಪಾದನೆ ಸಹಜ ಸ್ಥಿತಿಗೆ ಬರಲಿದೆ. ಇಲ್ಲದಿದ್ದರೆ 10-15 ದಿನಗಳ ನಂತರ ತೀವ್ರ ಸಂಕಷ್ಟಕ್ಕೆ ಒಳಗಾಗುವುದು ಖಂಡಿತ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ವಿದ್ಯುತ್ ಆಭಾವವನ್ನು ಸುಧಾರಿಸಲು ಎಲ್ಲ ರೀತಿಯಿಂದಲೂ ಪ್ರಯತ್ನ ನಡೆಸಲಾಗಿದ್ದು, ಜಿಂದಾಲ್ ಮತ್ತು ಟಾಟಾ ಕಂಪನಿಯಿಂದ ತಲಾ 50 ಮೆಗಾ ವ್ಯಾಟ್ ಹಾಗೂ ವಿದ್ಯುತ್ ವ್ಯಾಪಾರ ಸಂಸ್ಥೆಯಿಂದ 500 ಮೆಗಾ ವ್ಯಾಟ್ ಖರೀದಿಸಲು ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X