ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸದಲ್ಲಿ ವಿದ್ಯುತ್ ಸಂಚಾರ, ಭೂಮಿಯಲ್ಲಿ ಸಂಚಕಾರ

By Staff
|
Google Oneindia Kannada News

Monsoon arives at Madikeri with thunderಮಡಿಕೇರಿ, ಜೂ. 3 : ಆಕಾಶ ಭೂಮಿಯನ್ನು ಸೇರಿಸುವ ಸೇತುವೆಯಂಥ ಕೋಲ್ಮಿಚು ಮತ್ತು ಗುಡುಗಿನ ಹಿಮ್ಮೇಳದ ಸಮೇತ ನೈರುತ್ಯ ಮುಂಗಾರು ಭಾರೀ ಆರ್ಭಟದೊಂದಿಗೆ ಜೀವನದಿ ಕಾವೇರಿಗೆ ಜನ್ಮಸ್ಥಾನವಾದ ಕೊಡಗಿನಲ್ಲಿ ಸೋಮವಾರ ರಾತ್ರಿ ಅಧಿಕೃತವಾಗಿ ಕಾಲಿರಿಸಿದೆ.

ಪ್ರತಿನಿಧಿಗಳಿಗೆ ಓಟಿನ ಮುದ್ರೆ ಒತ್ತಿ ವಿರಮಿಸುತ್ತಿದ್ದ ರೈತ ಬಾಂಧವರನ್ನು ಮೆತ್ತಗೆ ಕೈಹಿಡಿದೆಬ್ಬಿಸಿದೆ ಮುಂಗಾರು ಮಳೆ. ಇಲ್ಲಿಯ ರೈತರಿಗೆ ಸಂತಸ ತರುವುದರ ಜೊತೆಗೆ ಕತ್ತಲೆಯ ಕಾಣಿಕೆಯನ್ನೂ ಹೊತ್ತು ತಂದಿದೆ. ಸಿಡಿಲಿಗೆ ಅನೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಕ್ಕೊಳಗಾಗಿದೆ. ಮೊದಲೇ ವಿದ್ಯುತ್ ಅಭಾವವನ್ನು ಎದುರಿಸುತ್ತಿದ್ದ ಮಡಿಕೇರಿ ಜನತೆ ಕತ್ತಲೆಯಲ್ಲಿ ಕಾಲ ಕಳೆಯವಂತಾಗಿದೆ.

ಒಂದೇ ಸವನೆ ಸುರಿಯುತ್ತಿರುವ ಮಳೆಯಿಂದ ಜನರು ರಸ್ತೆಗೆ ಕೂಡ ಕಾಲಿಡದೇ ಬೆಚ್ಚಗೆ ಮನೆಯಲ್ಲೇ ಉಳಿದಿದ್ದಾರೆ. ಕೆಳಮಟ್ಟದಲ್ಲಿರುವ ಮನೆಗಳಲ್ಲಿ ನೀರು ನುಗ್ಗಿ ಉಪಟಳಕ್ಕೆ ಶುರುವಿಟ್ಟುಕೊಂಡಿದೆ. ಮಡಿಕೇರಿಯಲ್ಲಿ 1.65 ಇಂಚಿನಷ್ಟು ಮಳೆ ಒಂದೇ ಹೊಡೆತಕ್ಕೆ ಸುರಿದಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 165 ಇಂಚಿನಷ್ಟು ಮಳೆ ಹುಯ್ದು 14 ವರ್ಷಗಳ ದಾಖಲೆಯನ್ನು ನೀರುಪಾಲು ಮಾಡಿತ್ತು. ಈ ಬಾರಿ ಇನ್ನೂ ಉತ್ತಮ ಮಳೆಯ ನಿರೀಕ್ಷೆಯಿದೆ.

ಬಿಜಾಪುರದಲ್ಲಿ ಸಿಡಿಲಿಗೆ ಐವರ ಬಲಿ : ಜಿಲ್ಲೆಯ ಸಿಂಧಗಿ ತಾಲೂಕಿನಲ್ಲಿ ಸಿಡಿಲಿನ ಹೊಡೆತಕ್ಕೆ ಸಿಕ್ಕು ಬಾಲಕಿ ಸೇರಿದಂತೆ ಐವರು ಸುಟ್ಟು ಕರಕಲಾಗಿದ್ದಾರೆ. ನಾಲ್ವರು ಕೊರಹಳ್ಳಿಯಲ್ಲಿ ಸಾವನ್ನಪ್ಪಿದರೆ, ಬಳಗಾಪುರ ಕ್ರಾಸ್ ಬಳಿ ಐದು ವರ್ಷದ ಬಾಲಕಿ ಸಾವಿಗೀಡಾಗಿದ್ದಾಳೆ. ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಅಡಿಯಲ್ಲಿ ಆಶ್ರಯಿಸಿದಾಗ ಜವರಾಯ ಅವರ ಮೇಲೆ ಬಂದೆರಗಿದ್ದಾನೆ.

ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಚುರುಕು : ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡುಗಳಲ್ಲಿ ಮುಂಗಾರು ಮಳೆ ದಾಂಗುಡಿಯಿಟ್ಟಿದೆ. ಕೆಲವೆಡೆ ಭಾರೀ ಮಳೆಯಾಗಿದ್ದರೆ ಇನ್ನು ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಅತಿ ಹೆಚ್ಚು ಮಳೆ ನಾಪೋಕ್ಲುನಲ್ಲಿ ಸುರಿದಿದೆ. ಅಲ್ಲಿ 6 ಸೆಂ.ಮೀ.ಮಳೆಯಾಗಿದೆ. ಚಿಕ್ಕೋಡಿ, ಸಕಲೇಶಪುರ, ಹೊನ್ನಾಳಿಯಲ್ಲಿ 5 ಸೆಂ.ಮೀ., ಕುಂದಾಪುರ, ಶಿವಮೊಗ್ಗ, ತೊಂಡೇಭಾವಿ, ಮಧುಗಿರಿಯಲ್ಲಿ 4 ಸೆಂ.ಮೀ., ಕೋಟ, ಯಲ್ಲಾಪುರ, ತೀರ್ಥಹಳ್ಳಿ, ಬಂಡೀಪುರ, ಗೌರಿಬಿದನೂರು, ಹೊಸನಗರ, ಪಾವಗಢದಲ್ಲಿ 3 ಸೆಂ.ಮೀ. ಮಳೆ ಹುಯ್ದಿದೆ.

ಮುನ್ಸೂಚನೆ : ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ಘಾಟ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಪ್ರದೇಶದಲ್ಲಿ ಗಾಳಿ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬೀಸಲಿರುವುದರಿಂದ ಮೀನುಗಾರರು ಸಮುದ್ರದಲ್ಲಿ ಮೀನು ಹಿಡಿಯುವ ಸಾಹಸಕ್ಕೆ ಇಳಿಯಬಾರದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X