ಸರ್ಕಾರ ರಚನೆಯ ಮೊದಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

Shankarlinge Gowdaಬೆಂಗಳೂರು, ಮೇ 30 : ಯಡಿಯೂರಪ್ಪ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನ ಹಿಂದೆಯೇ ಬಿಜೆಪಿಯಲ್ಲಿ ಭಾರೀ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಶಂಕರಲಿಂಗೇಗೌಡ ಅವರಿಗೆ ಪ್ರಥಮ ಪಟ್ಟಿಯಲ್ಲಿ ಸಂಪುಟದಲ್ಲಿ ಸ್ಥಾನ ದೊರೆಯದೇ ಇದ್ದುದು ಯಡಿಯೂರಪ್ಪನವರಿಗೆ ಹಾಲು ಜೇನಿನ ಬದಲು ಬಿಸಿ ತುಪ್ಪ ಬಾಯಿಗೆ ಸುರಿದುಕೊಂಡಂತಾಗಿದೆ.

ಪಕ್ಷೇತರರು ಸೇರಿದಂತೆ ಎಲ್ಲರನ್ನೂ ತೃಪ್ತಿಪಡಿಸುವ ಕಾಯಕದಲ್ಲಿ ತೊಡಗಿರುವ ಯಡಿಯೂರಪ್ಪನವರಿಗೆ ಭಿನ್ನಮತ ಬರಸಿಡಿಲಿನಂತೆ ಬಂದೆರಗಿದೆ. ಶೆಟ್ಟರ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದಿದ್ದಿದ್ದಕ್ಕೆ ಉತ್ತರ ಕರ್ನಾಟಕದಲ್ಲಿ ಅವರ ಅಭಿಮಾನಿಗಳ ಆಕ್ರೋಶ ಮುಗಿಲು ಮುಟ್ಟಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸೇರಿದಂತೆ ಎಲ್ಲ ಸದಸ್ಯರು ರಾಜಿನಾಮೆ ಸಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಬಸ್ಸಿನ ಮೇಲೆ ಕಲ್ಲನ್ನು ತೂರಲಾಗಿದ್ದು, ಶೆಟ್ಟರ್ ಅಭಿಮಾನಿಗಳು ಮತ್ತು ಕಾರ್ಯಕರ್ತರು ಹಿಂಸಾಚಾರಕ್ಕಿಳಿದಿದ್ದಾರೆ.

ಪ್ರಥಮ ಹಂತದ ಸಂಪುಟ ನೋಡಿದರೆ ಪಕ್ಷೇತರರು ಮತ್ತು ಅವರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದ ರೆಡ್ಡಿ ಸಹೋದರರಿಗೆ ಯಡಿಯೂರಪ್ಪ ಮಣೆ ಹಾಕಿದ್ದು ಕಂಡುಬಂದಿದೆ. ಪ್ರಥಮ ಬಾರಿಗೆ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆ ಮತ್ತು ಇತ್ತೀಚೆಗೆ ಬಿಜೆಪಿ ಸೇರಿದ ಬೊಮ್ಮಾಯಿಯವರಿಗೆ ಸ್ಥಾನ ನೀಡಿ ಹಳಬರನ್ನು ಕಡೆಗಣಿಸಿದ್ದು ಭಿನ್ನಮತ ಸ್ಫೋಟಿಸಲು ಕಾರಣವಾಗಿದೆ. ಬಿಜೆಪಿಯ ಕಮಲ ಅರಳುತ್ತಲೇ ಮುದುಡಿದಂತಾಗಿದೆ.

ಶಂಕರಲಿಂಗೇಗೌಡ ಕಿಡಿಕಿಡಿ

ಶಿಸ್ತಿನ ಪಕ್ಷವೆಂದೇ ಗುರುತಿಸಿಕೊಂಡಿರುವ ಭಾರತೀಯ ಜನತಾ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. ಚಾಮರಾಜ ಕ್ಷೇತ್ರದಿಂದ ಸತತ ನಾಲ್ಕು ಸಲ ಶಾಸಕರಾಗಿ ಆಯ್ಕೆಯಾಗಿರುವ ಶಂಕರಲಿಂಗೇಗೌಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಮಾನದಂಡದ ಮೇಲೆ ಸಚಿವ ಸಂಪುಟವನ್ನು ರಚನೆ ಮಾಡಲಾಗಿದೆ ಗೊತ್ತಿಲ್ಲ. ನಾನು ನನ್ನ ರಾಜಕೀಯ ಜೀವನದಲ್ಲಿ ಶುದ್ಧ ಹಸ್ತ. ಯಾವ ಪ್ರಕರಣಗಳು ನನ್ನ ಮೇಲೆ ದಾಖಲಾಗಿಲ್ಲ. ಆದರೂ ಕೂಡಾ ಸಚಿವ ಸ್ಥಾನ ಯಾಕಿಲ್ಲ ಎಂದು ಶಂಕರಲಿಂಗೇಗೌಡ ಕೆಂಡ ಕಾರಿದ್ದಾರೆ.

ಮೈಸೂರು ಪ್ರದೇಶದಲ್ಲಿ ಇಬ್ಬರು ಮಾತ್ರ ಶಾಸಕರಿದ್ದು, ಪಕ್ಷ ಸಂಘಟನೆ ದೃಷ್ಟಿಯಿಂದ ಸಚಿವ ಸ್ಥಾನವನ್ನು ಈ ಸಲ ನೀಡಬೇಕಿತ್ತು ಎಂದು ಆಗ್ರಹಿಸಿರುವ ಅವರು, ನನಗಾಗಿರುವ ಅನ್ಯಾಯ ಇಡೀ ಮೈಸೂರು ಪ್ರದೇಶದ ಜನರಿಗಾಗಿದ್ದು, ಆ ದೇವರು ಅವರನ್ನು ನೋಡಿಕೊಳ್ಳಲಿ ಎಂದು ನೊಂದು ನುಡಿದರು. ವೇದಿಕೆಯ ಎದುರಿಗೇ ತನ್ನನ್ನೇಕೆ ಸಂಪುಟದಲ್ಲಿ ಸೇರಿಸಿಲ್ಲವೆಂದು ಕೇಳಿದಾಗ, ಶುಭ ಸಮಾರಂಭಕ್ಕೆ ಅಡ್ಡಿ ಬರಬೇಡ, ಮೊದಲು ಕೆಳಗಿಳಿ ಎಂದು ಯಡಿಯೂರಪ್ಪ ತುಚ್ಛೀಕರಿಸಿ ಆಡಿರುವ ಮಾತುಗಳಿಂದ ಅತೀವ ನೋವಾಗಿದ್ದು, ಕಣ್ಣೀರು ಸುರಿಸಿ ಮೈಸೂರಿಗೆ ತೆರಳಿದೆ ಎಂದು ಬೇಸರದಿಂದ ಹೇಳಿದರು.

ಜಗದೀಶ್ ಶೆಟ್ಟರ್ ಸಿಟಿಸಿಟಿ

ಪಕ್ಷ ಇನ್ನೊಬ್ಬ ಹಿರಿಯ ನಾಯಕ, ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ ಜಗದೀಶ್ ಶೆಟ್ಟರ್ ಅವರು ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ. ಸಚಿವ ಸ್ಥಾನ ತಪ್ಪಿಸಿ ವಿಧಾನಸಭೆ ಸಭಾಧ್ಯಕ್ಷರನ್ನಾಗಿ ನೇಮಕ ಮಾಡಲು ಪಕ್ಷದ ವರಿಷ್ಠರು ಪ್ರಯತ್ನಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸಭಾಧ್ಯಕ್ಷ ಸ್ಥಾನಕ್ಕೆ ಹಿರಿಯ ಶಾಸಕರನ್ನು ನೇಮಿಸಿ ಎಂದು ಅಂಗಲಾಚಿದರೂ, ವರಿಷ್ಠರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸಭಾಧ್ಯಕ್ಷನಾಗಲು ಸುತಾರಾಂ ಸಿದ್ಧನಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಸಭಾಧ್ಯಕ್ಷ ಸ್ಥಾನ ಅಲಂಕರಿಸಿದರೆ ಕ್ಷೇತ್ರ ಅಭಿವೃದ್ಧಿ ಸಾಧ್ಯವಿಲ್ಲ. ಜತೆಗೆ ಉತ್ತರ ಕರ್ನಾಟಕದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವೆಲ್ಲವನ್ನೂ ಬಗೆಹರಿಸಲು ಪ್ರಭಾವಿ ನಾಯಕನ ಅವಶ್ಯಕತೆ ಇದೆ. ಈ ಎಲ್ಲವನ್ನೂ ವರಿಷ್ಠರ ಮುಂದೆ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ಶೆಟ್ಟರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಖಂಡಿಸಿ ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ, ಪ್ರತಿಭಟನೆಗಳು ಆರಂಭವಾಗಿವೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
25ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ
ಕರ್ನಾಟಕದ ಮುಖ್ಯಮಂತ್ರಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+