ಕೂಲಿಗೆ ಚಕ್ಕರ್; ಚುನಾವಣೆ ಪ್ರಚಾರಕ್ಕೆ ಹಾಜರ್!
ದಾವಣಗೆರೆ, ಮೇ 9: ದಾವಣಗೆರೆ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರಿಗೆ ಬರಗಾಲ ಬಂದಿದೆ. ಉಪಹಾರಮಂದಿರ, ಬಾರು, ಬೇಕರಿ, ಪೆಟ್ರೋಲ್ ಬಂಕು ಹಾಗೂ ಗುತ್ತಿಗೆದಾರರು ಕೂಲಿ ಕಾರ್ಮಿಕರು ಸಿಗದೆ ಹೈರಾಣಾಗಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಸಹ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಚುನಾವಣೆ ಪ್ರಚಾರ ಹಾಗೂ ಚುನಾವಣೆಗೆ ಸಂಬಂಧಿಸಿದ ಮತ್ತಿತ್ತರ ಕಾರ್ಯಗಳಿಗಾಗಿ ರಾಜಕೀಯ ಪಕ್ಷಗಳು ಇವರನ್ನು ಬಳಸಿಕೊಂಡಿರುವುದೇ ಇದಕ್ಕೆಲ್ಲಾ ಕಾರಣ.
ರಾಜಕೀಯ ಪಕ್ಷವೊಂದರ ಚುನಾವಣೆ ಪ್ರಚಾರಕ್ಕಾಗಿ ಹೋದರೆ ದಿನ ಒಂದಕ್ಕೆ 150 ರು.ಗಳಿಂದ 200 ರು.ಗಳ ಕೂಲಿ ಸಿಗುತ್ತದೆ. ಜೊತೆಗೆ ಎರಡು ಹೊತ್ತಿನ ಮಜಬೂತಾದ ಊಟ ಉಪಚಾರಗಳಿಗೆ ಚಿಂತೆ ಇಲ್ಲ. ಹಾಗಾಗಿ ಕಾರ್ಮಿಕರು ಕೂಲಿಗೆ ಚಕ್ಕರ್ ಹೊಡೆದು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನುತ್ತಾರೆ ಬಸವರಾಜು.
ಕೂಲಿ ಕಾರ್ಮಿಕರ ಅಭಾವದಿಂದ ಮಾಲೀಕರೇ ಕೂಲಿಗಳಾಗಿ ಬದಲಾಗಿ ತಮ್ಮ ಕುಟುಂಬದ ಇತರ ಸದಸ್ಯರನ್ನು ತಮ್ಮ ವಾಣಿಜ್ಯ ಚಟುವಟಿಕೆಗಳಿಗೆ ಡುಡಿಸಿಕೊಳ್ಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಸಣ್ಣ ಪುಟ್ಟ ಕಾರ್ಮಿಕರೆಲ್ಲಾ ಒಳ್ಳೆ ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದು ದೂರುತ್ತಾರೆ ಹೋಟೆಲ್ ಮಾಲೀಕರು. ದೊಡ್ಡ ದೊಡ್ಡ ಸಮಾರಂಭ ಹಾಗೂ ಮದುವೆ ಇನ್ನಿತರ ಕಾರ್ಯಗಳಿಗೆ ಬಾಣಸಿಗರು ಸಿಗದೆ ಹೋಟೆಲ್ ಉದ್ಯಮ ಜಿಲ್ಲೆಯಲ್ಲಿ ಉಪವಾಸ ಬಿದ್ದಿದೆ.
ದಾವಣಗೆರೆಯ ದಂತವೈದ್ಯಕೀಯ ಕಾಲೇಜಿನಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಮಂಜು ಅವರ ಕಥೆಯೇ ಬೇರೆ. ಇವರ ಬಳಿ ಕೆಲಸ ಮಾಡುತ್ತಿದ್ದ ಹೋಟೆಲ್ ಕಾರ್ಮಿಕರು ಚುನಾವಣೆ ಕಾರ್ಯಗಳಿಗೆ ಸ್ಥಳಾಂತರವಾಗಿರುವ ಕಾರಣ ಕ್ಯಾಂಟೀನಿಗೆ ಬರುವ ಕಾಲೇಜಿನ ವ್ಯಾಪಕ ನೌಕರ ವರ್ಗಕ್ಕೆ ಉತ್ತರ ಹೇಳುವುದೇ ಕಷ್ಟವಾಗಿದೆ ಎನ್ನುತ್ತಾರೆ.
ವಿವಿಧ ರಾಜಕೀಯ ಪಕ್ಷಗಳು ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದೇ ತಡ ನಮ್ಮ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗರು ಹೇಳದೆ ಕೇಳದೆ ಕಾಣೆಯಾದರು. ಇವರೆಲ್ಲಾ ಚುನಾವಣಾ ಪ್ರಚಾರದಲ್ಲಿ ಕ್ರಿಯಾಶೀಲರಾಗಿದ್ದಾರೆ ಎನ್ನುತ್ತಾರೆ ಬೇಕರಿ ಮಾಲೀಕರಾದ ಸಂಪತ್ ಹಾಗೂ ಕೇಶವಮೂರ್ತಿ. ರುಚಿಕಟ್ಟಾದ ಊಟ, ಹಣ, ಹೆಂಡ ಸಿಗುತ್ತಿರಬೇಕಾದರೆ ಅವರಿಗೆ ಬೇಕರಿ ಕೆಲಸ ಯಾಕಾದರೂ ಬೇಕು ಎಂಬುದು ಅವರ ಅಳಲು.
ಕಳೆ ಕೀಳಲು, ಬಿತ್ತನೆ ಮಾಡಲು ದಮ್ಮಯ್ಯ ಅಂದರೂ ಕೂಲಿಗಳು ಬರುತ್ತಿಲ್ಲ ಸ್ವಾಮಿ ಎನ್ನುತ್ತಾರೆ ಹರಿಹರದ ತಿಪ್ಪಣ್ಣ. ಕೂಲಿ ಕಾರ್ಮಿಕರು ಸಿಗದೆ ತಲೆ ಮೇಲೆ ಕೈಹೊತ್ತು ಕುಳಿತಿರುವ ಮಾಯಕೊಂಡದ ಕಲ್ಲೇಶಪ್ಪನ ಪರಿಸ್ಥಿತಿ ಸಹ ಇದಕ್ಕ್ಕಿಂತಲೂ ಭಿನ್ನವಾಗಿಲ್ಲ.
ಉದ್ಯೋಗಕ್ಕೆ ಚಿಂತೆಯಿಲ್ಲ!
ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯಲ್ಲಿ ಕಾರ್ಯರಂಭ ಮಾಡಿದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಉದ್ಯೋಗ ಹರಿಸಿಕೊಂಡು ಯಾರೂ ಬರುತ್ತಿಲ್ಲ. ಅವರಿಗೆಲ್ಲಾ ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ಕೆಲಸ ಖಾತ್ರಿಯಾದ ಕಾರಣ ಹೀಗಾಗಿದೆ. ದಾವಣಗೆರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಪ್ರಕಾರ ಈ ಯೋಜನೆಯಡಿ ಉದ್ಯೋಗ ಹುಡುಕಿಕೊಂಡು ಬರುವವರ ಸಂಖ್ಯೆ ಕಳೆದ ಒಂದು ತಿಂಗಳಲ್ಲಿ ಶೇ. 46ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ.
ಉದ್ಯೋಗ ಖಾತ್ರಿ ಯೋಜನೆಯ ಪ್ರಕಾರ, ಒಬ್ಬರಿಗೆ ದಿನಕ್ಕೆ 74 ರು.ಗಳನ್ನು ಕೊಡುತ್ತಾರೆ. ಅದೇ ಚುನಾವಣೆ ಪ್ರಚಾರಕ್ಕೆ ಹೋದರೆ ಊಟೋಪಚಾರಗಳನ್ನು ಬಿಟ್ಟು ದಿನಕ್ಕೆ 200 ರು.ಗಳು ಸಿಗುತ್ತದೆ. ಯಾವುದು ಲಾಭದಾಯಕ ನೀವೇ ಹೇಳಿ? ಎಂದು ಪ್ರಶ್ನಿಸುತ್ತಾರೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಧಿಕಾರಿಗಳು.
ಚುನಾವಣೆ ಪ್ರಚಾರಕ್ಕೆ ಭಾರಿ ಪ್ರಮಾಣದ ಜನರನ್ನು ಬಳಸಿಕೊಳ್ಳುವಂತಿಲ್ಲ ಎನ್ನುತ್ತದೆ ಚುನಾವಣೆ ಆಯೋಗದ ನೀತಿ ಸಂಹಿತೆ. ಆದರೆ ರಾಜಕೀಯ ಪಕ್ಷಗಳು ಈ ನೀತಿ ಸಂಹಿತೆಯನ್ನು ಗಾಳಿಗೆ ತೂರುತ್ತಿವೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications