ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಸೋಲಿಲ್ಲದ ಸರದಾರನ ಸವಾಲ್

By Staff
|
Google Oneindia Kannada News

Yaddyurappaಪ್ರಸ್ತುತ ವಿಧಾನಸಭೆ ಚುನಾವಣೆ ಹಿಂದೆಂದಿಗಿಂತಲೂ ಪ್ರತಿಷ್ಠೆಯ ಅಖಾಡವಾಗಿ ಮಾರ್ಪಾಡಾಗಿದೆ. ಘಟಾನುಘಟಿಗಳು ಮುಖಾಮುಖಿಯಾಗಲಿದ್ದಾರೆ. ಗಣಿಧಣಿಗಳ ಆರ್ಭಟ ಮೇರೆಮೀರುವುದು ನಿಚ್ಚಳವಾಗಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಹಣ ಹೆಂಡವನ್ನು ನೀರಿನಂತೆ ಖರ್ಚು ಮಾಡುತ್ತಿರುವುದು ದೊಡ್ಡ ಸುದ್ದಿಯೇನಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಶಿಕಾರಿಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್.ಬಂಗಾರಪ್ಪ ಸ್ಪರ್ಧಿಸುತ್ತಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

* ಮೃತ್ಯುಂಜಯ ಕಲ್ಮಠ

ರಾಜ್ಯದ ಪ್ರಮುಖ ಪಕ್ಷ ಬಿಜೆಪಿ ಭಾರೀ ಉತ್ಸಾಹದಲ್ಲಿದೆ. ಅಧಿಕಾರಕ್ಕೆ ಮೂರೆ ಗೇಣು ಎನ್ನುವಂತೆ ಬಿಜೆಪಿ ಪಕ್ಷದ ಮುಖಂಡರು ವರ್ತಿಸುತ್ತಿದ್ದಾರೆ. ಅನುಕಂಪದ ಅಲೆ ಜತೆಗೆ ಯಡಿಯೂರಪ್ಪ ಅವರು ಎರಡು ಬಾರಿ ಮಂಡಿಸಿದ ಬಜೆಟ್ ಆಧಾರವಾಗಿಟ್ಟುಕೊಂಡು ಈ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಬಹಿರಂಗವಾಗಿ ಬಿಜೆಪಿ ನಾಯಕರು ಘೋಷಿಸಿದ್ದಾರೆ. ಮತಬ್ಯಾಂಕ್ ಗುರಿಯಾಗಿಟ್ಟುಕೊಂಡು ಜನಪರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಎಲ್ಲದರ ನಡುವೆ ಇದೀಗ ಬಿಜೆಪಿ ಪಾಳೆಯದಲ್ಲಿ ಆತಂಕದ ಕಾರ್ಮೋಡ ಸೃಷ್ಟಿಯಾಗಿದೆ. ಕಾರಣ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಶಿಕಾರಿಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್.ಬಂಗಾರಪ್ಪ ಸ್ಪರ್ಧಿಸುತ್ತಿರುವುದು ಎಲ್ಲರ ಗಮನ ಅತ್ತ ಹರಿಯಲಿಕ್ಕೆ ಕಾರಣವಾಗಿದೆ.

ಎಸ್.ಬಂಗಾರಪ್ಪ ಕರ್ನಾಟಕ ರಾಜಕೀಯ ರಂಗದಲ್ಲಿ ವಿಶಿಷ್ಠ ವ್ಯಕ್ತಿತ್ವವುಳ್ಳ ರಾಜಕಾರಣಿ, ತಮ್ಮ ನೇರ ನಡೆ, ದಿಟ್ಟ ಮಾತಿನಿಂದ ಎಲ್ಲರನ್ನೂ ಆಕರ್ಷಿಸುವ ಚಾಣಕ್ಷತೆವುಳ್ಳ ಮುತ್ಸದ್ದಿ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿ, ನಂತರ ಕೆಸಿಪಿ ಎಂಬ ಪಕ್ಷವನ್ನು ಕಟ್ಟಿ ಕಂಗಾಲಾಗಿ ದಿಕ್ಕು ತಪ್ಪಿದಂತಾಗಿದ್ದ ಸಮಯದಲ್ಲಿ ಬಿಜೆಪಿಯ ಪಾಳೆಯದಲ್ಲಿ ಗುರುತಿಸಿಕೊಂಡು, ಈಗ ಮತ್ತೆ ಅಲ್ಲಿಂದ ಹೊರ ಬಂದು, ಮುಲಾಯಂಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಗುರುತುಸಿಕೊಂಡಿದ್ದಾರೆ. ಇಷ್ಟೆ ಆಗಿದ್ದರೇ ಎಲ್ಲರಂತೆ ಇದು ಒಂದು ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎನ್ನಬಹುದಿತ್ತು. ಆದರೆ, ಬಂಗಾರಪ್ಪ ತನ್ನ ರಾಜಕೀಯ ಜೀವನದುದ್ದಕ್ಕೂ ಅನೇಕ ಹೊಸತನಕ್ಕೆ ಕಾರಣೀಭೂತರಾಗಿದ್ದಾರೆ. ಈ ಸಲ ಇನ್ನೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ಈ ಸಲ ಚುನಾವಣೆ ಜಿದ್ದಾಜಿದ್ದಿನಲ್ಲಿ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರ ಮತ್ತು ತಮ್ಮ ರಾಜಕೀಯ ಕಡು ವೈರಿ ಕಾಗೋಡು ತಿಮ್ಮಪ್ಪ ಸ್ಪರ್ಧಿಸುವ ಸಾಗರ ಕ್ಷೇತ್ರಗಳಲ್ಲಿ ಆಖಾಡಕ್ಕಿಳಿಯಲು ತಯಾರಿ ನಡೆಸಿದ್ದಾರೆ ಬಂಗಾರಪ್ಪ. ಇದರಿಂದ ದೇಶದ ರಾಜಕಾರಣಿಗಳ ಚಿತ್ತ ಶಿಕಾರಿಪುರದ ಕಡೆಗೆ ಹರಿಯುವಂತೆ ಮಾಡಿದ್ದಾರೆ. ಕುತೂಹಲಕ್ಕೆ ಕಾರಣವಾಗಿರುವ ಈ ಸ್ಪರ್ಧೆ ಮಾಜಿ ಮುಖ್ಯಮಂತ್ರಿಗಳ ಪ್ರತಿಷ್ಠೆಯ ಕಣವಾಗಿ ರೂಪಗೊಳ್ಳಲಿದೆ. ಒಂದು ಕಡೆ ಮುಖ್ಯಮಂತ್ರಿ ಬಿಂಬಿತ ಅಭ್ಯರ್ಥಿ ಇನ್ನೊಂದು ಕಡೆ ರಾಜಕೀಯ ಚಾಣಕ್ಯ. ಫಲಿತಾಂಶ ಮಾತ್ರ ಅಯೋಮಯ.

S Bangarappaಬಂಗಾರಪ್ಪ ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಹವಣಿಸಿದರಾದರೂ ಫಲಪ್ರದವಾಗಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ನಿರೀಕ್ಷಿಸಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇನ್ನು ದೇವೇಗೌಡರ ಜತೆಗೆ ಮಾತುಕತೆ ನಡೆಯಿತಾದರೂ, ಗೌಡರು ಇದಕ್ಕೆ ಸೊಪ್ಪು ಹಾಕಲಿಲ್ಲ. ಸೋತರೂ ನನ್ನದೇ, ಗೆದ್ದರೂ ನನ್ನದೇ ಎಂಬ ನಿಲುವಿಗೆ ಅಂಟಿಕೊಂಡ ಗೌಡರು, ಬಂಗಾರಪ್ಪ ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಇದನ್ನು ಅರಿತ ಬಂಗಾರಪ್ಪ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರವಾಹದಲ್ಲಿ ಹೇಳ ಹೆಸರಿಲ್ಲದೇ ಹೊಗಬೇಕಾತ್ತದೆ ಎನ್ನುವುದನ್ನು ಅರಿತ ಈ ಸೋಲಿಲ್ಲದ ಸರದಾರ, ಇಬ್ಬರು ಘಟಾನುಘಟಿಗಳ ಎದುರು ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಫಲಿತಾಂಶ ಕಾದುನೋಡಬೇಕಷ್ಟೆ.

ನಾಮಪತ್ರ ಸಲ್ಲಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಬಾರಿ ಚುನಾವಣೆಯಲ್ಲಿ ಶಿಕಾರಿಪುರದ ಜನತೆ ಈ ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ಆರಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು. ಬಂಗಾರಪ್ಪ ತಮ್ಮ ಎದುರು ಸ್ಪರ್ಧೆಗೆ ಇಳಿಯಲಿರುವುದರಿಂದ ಯಡಿಯೂರಪ್ಪ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ, ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹುಟ್ಟಿಕೊಂಡಿದ್ದವು. ಆದರೆ ಇದನ್ನೆಲ್ಲ ಸ್ಪಷ್ಟವಾಗಿ ತಳ್ಳಿ ಹಾಕಿದ ಯಡಿಯೂರಪ್ಪ, ನನ್ನ ಕರ್ಮ ಭೂಮಿಯಲ್ಲಿ ನನ್ನ ಹೋರಾಟ ಎಂದು ಹೇಳಿದ್ದಾರೆ. ಏನೇ ಆದರೂ ಚುನಾವಣೆ ಅನೇಕ ಹೊಸತನಕ್ಕೆ ಕಾರಣವಾಗುವುರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X