ಕಾಂಗ್ರೆಸ್‌ಗೆ ವಿದಾಯ ಹೇಳಿದ ಜಾಫರ್ ಷರೀಫ್?
ಬೆಂಗಳೂರು,ಏ.25: ಕಾಂಗ್ರೆಸ್‌ನಲ್ಲಿ ಎದ್ದಿರುವ ಬಂಡಾಯ ಮತ್ತೊಬ್ಬ ಹಿರಿ ನಾಯಕನನ್ನು ಮನೆ ತೊರೆಯುವಂತೆ ಮಾಡಿದೆ. ಟಿಕೆಟ್ ಹಂಚಿಕೆ ವಿಷಯದಲ್ಲಿ ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ದೊರಕಿಲ್ಲ. ಈ ವಿಚಾರವಾಗಿ ತೀವ್ರ ಅಸಮಾಧಾನವಾಗಿದೆ ಎಂದಿರುವ ಕೇಂದ್ರದ ಮಾಜಿ ರೈಲ್ವೆ ಸಚಿವ,ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ.ಜಾಫರ್ ಷರೀಫ್ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿರುವುದಾಗಿ ಶುಕ್ರವಾರ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಜಾಫರ್ ಷರೀಫ್, ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ತಮಗೆ ಬೆಲೆ ಸಿಗುತ್ತಿಲ್ಲ ಎನ್ನುವ ಕೊರಗು ಕಾಡುತ್ತಿತ್ತು. ರಾಜ್ಯ ಕಾಂಗ್ರೆಸ್ ಪಕ್ಷದ ಮುಖಂಡರು ಜಾಫರ್ ಷರೀಫ್ ಅವರನ್ನು ಕಡೆಗಣಿಸಿದ್ದು, ಅನೇಕ ಬಾರಿ ವ್ಯಕ್ತವಾಗಿತ್ತು. ಇದನ್ನೆಲ್ಲ ನುಂಗಿಕೊಂಡು ಪಕ್ಷದಲ್ಲಿ ಮುನ್ನಡೆದಿದ್ದ ಅವರು, ಇದೀಗ ಅವರು ತಮ್ಮ ಮೊಮ್ಮಗನಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆಯಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಷರೀಫ್ ತಮ್ಮ ಮುಂದಿನ ಹೆಜ್ಜೆ ಏನು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಜಿಜ್ಞಾಸೆ ಮೂಡಿಸಿದ್ದಾರೆ. ಒಂದು ಮೂಲದ ಪ್ರಕಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ಬಿಎಸ್ ಪಿ ಇಲ್ಲವೇ ಶರದ್ ಪವಾರ್ ಅವರ ಎನ್ ಸಿಪಿ ಪಕ್ಷವನ್ನು ಸೇರುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಬಿಎಸ್ ಪಿ ಸಮಾವೇಶ ನಡೆಸಿದಾಗಲೆಲ್ಲ ಜಾಫರ್ ಷರೀಫ್ ಅದರಲ್ಲಿ ಭಾಗವಹಿಸಿದ್ದರು, ಅದರಿಂದಾಗಿ ಈ ಗಾಳಿ ಸುದ್ದಿ ಹಬ್ಬಲು ಕಾರಣವಾಗಿದೆ. ಒಟ್ಟಾರೆಯಾಗಿ ಹಿರಿಯ ಮುಖಂಡ ಜಾಫರ್ ಷರೀಫ್ ಪಕ್ಷದ ಮುಖಂಡರ ವಿರುದ್ಧ ಬಂಡಾಯವೆದ್ದಿರುವುದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಅಲ್ಪಸಂಖ್ಯಾತರ ನಾಯಕರಾಗಿರುವ ಷರೀಫ್, ನಾಯಕರ ವರ್ತನೆಯಿಂದ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷ ಇದರಿಂದ ಭಾರೀ ಬೆಲೆ ತೆರುವುದಂತೂ ಖಂಡಿತ ಎನ್ನುವ ಮಾತು ಕೇಳಿಬರುತ್ತಿದೆ.
ಜಾಫರ್ ಷರೀಫ್ ರಾಜೀನಾಮೆ ಕುರಿತು ಹೈಕಮಾಂಡ್ ಈ ವರೆಗೂ ತುಟಿಪಿಟಕ್ಕೆಂದಿಲ್ಲ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆದಾಗಿನಿಂದಲೂ ಅಸಮಾಧಾನದಿಂದ ಕುದಿಯುತ್ತಿರುವ ಷರೀಫ್, ಇತ್ತೀಚಿಗೆ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣಕ್ಕೆ ಆಗಮಿಸಿದಾಗಲೂ ಅವರ ವಿರುದ್ಧ ಹೇಳಿಕೆ ನೀಡಿದ್ದರು. ಒಂದು ರೀತಿಯಲ್ಲಿ ಹೈಕಮಾಂಡ್ ಅವಕೃಪೆಗೆ ಒಳಗಾಗಿ ಮೂಲೆಗುಂಪಾಗಿದ್ದರು. ಇದನ್ನು ಅರಿತ ಷರೀಫ್ ಹೈಕಮಾಂಡ್‌ನ್ನು ಎಚ್ಚರಿಸಲಿಕ್ಕೆ ರಾಜೀನಾಮೆ ತಂತ್ರವನ್ನು ಮಾಡಿರಬಹುದು ಎನ್ನುವ ಮಾತನ್ನು ಕೂಡಾ ಅಲ್ಲಗೆಳೆಯುವಂತಿಲ್ಲ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
