ರವಿಕಾಂತ್ ಶರ್ಮಾ ಹಾಗೂ ಮೂವರಿಗೆ ಜೀವಾವಧಿ
ನವದೆಹಲಿ, ಮಾ.24: ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಕರ್ತೆ ಶಿವಾನಿ ಭಟ್ನಾಗರ ಕೊಲೆ ಪ್ರಕರಣದ ಅಪರಾಧಿಗಳಾದ ರವಿಕಾಂತ್ ಶರ್ಮಾ ಹಾಗೂ ಇತರ ಮೂವರಿಗೆ ನವದೆಹಲಿಯ ತ್ವರಿತ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಆರ್.ಕೆ.ಶರ್ಮಾಗೆ 20,000 ರೂ. ದಂಡವನ್ನೂ ವಿಧಿಸಿದೆ.
ಜ.23, 1999ರಂದು ನವದೆಹಲಿಯ ನವಕುಂಜ್ ಅಪಾರ್ಟ್‌ಮೆಂಟ್‌ನಲ್ಲಿ ಶಿವಾನಿ ಕೊಲೆಯಾಗಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್ ಆರ್.ಕೆ.ಶರ್ಮಾ, ಸತ್ಯ ಪ್ರಕಾಶ್, ಶ್ರೀ ಭಗವಾನ್ ಮತ್ತು ಸುಪಾರಿ ಹಂತಕ ಪ್ರದೀಪ್ ಶರ್ಮಾರನ್ನ್ನು ಅಪರಾಧಿಗಳು ಎಂದು ಮಾ.18ರಂದು ತೀರ್ಪು ನೀಡಿತ್ತು. ಇಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಕೆ.ಶಾಸ್ತ್ರಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಫಿರ್ಯಾದಿದಾರರು ನ್ಯಾಯಾಧೀಶರಲ್ಲಿ ವಿನಂತಿಸಿಕೊಂಡಿದ್ದರು. ಈ ಕೊಲೆ ಪ್ರಕರಣ ಅಪರೂಪದಲ್ಲಿ ಅಪರೂಪವೇನಲ್ಲದ ಕಾರಣ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿರುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.
ಹರ್ಯಾಣ ಬಂಧೀಖಾನೆಯ ಇನ್ಸ್‌ಫೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದ ಆರ್.ಕೆ.ಶರ್ಮಾ ಈಗ ಭಾರತದ ಅತಿದೊಡ್ಡ ಜೈಲಿನ ಖೈದಿ. ಪಿ.ಎಚ್.ಡಿ ಮಾಡಿರುವ ಅರ್.ಕೆ.ಶರ್ಮಾ ಈಗ ತಿಹಾರ್ ಜೈಲಿನಲ್ಲಿ ಸಾಧಾರಣ ಕೂಲಿ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ತಮ್ಮ ಜೀವನ ಕಳೆಯಲಿದ್ದಾರೆ.
ಒಂದು ವೇಳೆ ನಾನು ತಿಹಾರ್ ಜೈಲಿನ ಮುಖ್ಯಸ್ಥಳಾಗಿದ್ದರೆ ಆರ್.ಕೆ.ಶರ್ಮಾರ ಪ್ರತಿಭೆಯನ್ನು ಇತರ ಖೈದಿಗಳಿಗೆ ಪಾಠ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಹೇಳಿದ್ದಾರೆ. ಆರ್.ಕೆ.ಶರ್ಮಾಗೆ ಫ್ರೆಂಚ್ ಭಾಷೆ ಚೆನ್ನಾಗಿ ಗೊತ್ತು. ಹಾಗೆಯೇ ಖೈದಿಗಳಿಗೆ ಧ್ಯಾನದ ತರಗತಿಗಳನ್ನುತೆಗೆದುಕೊಳ್ಳಲು ಅವರನ್ನು ಬಳಸಿಕೊಳ್ಳಬಹುದು ಎಂದು ಕಿರಣ್ ಬೇಡಿ ಸಲಹೆ ಕೊಟ್ಟಿದ್ದಾರೆ.
(ಏಜೆನ್ಸೀಸ್)












Click it and Unblock the Notifications