ನಿಗದಿಯಂತೆ ವಿಮಾನ ನಿಲ್ದಾಣ ಶುರು : ಬ್ರೂನರ್ ಸ್ಪಷ್ಟನೆ
ಬೆಂಗಳೂರು, ಮಾ. 11 : ಕಾಮಗಾರಿ ಪೂರ್ಣಗೊಳ್ಳದ ಕಾರಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಡವಾಗಿ ಆರಂಭಗೊಳ್ಳುವುದೆಂಬ ಸುದ್ದಿಯನ್ನು ಬಿಐಎಎಲ್ ಸಿಇಓ ಅಲ್ಬರ್ಟ್ ಬ್ರೂನರ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಕಾಮಗಾರಿ ಪೂರ್ಣಗೊಂಡಿದ್ದು ನಿಗದಿತ ದಿನಾಂಕ, ಅಂದರೆ ಮಾರ್ಚ್ 30ರಂದೇ ಉದ್ಘಾಟನೆಯಾಗಲಿದೆ ಎಂದು ಎಲ್ಲ ಊಹಾಪೋಹಗಳಿಗೆ ತೆರೆಯೆಳೆದಿದ್ದಾರೆ.
ಕಾರ್ಯಾರಂಭ ಮಾಡುವುದಕ್ಕೆ ಇನ್ನೂ ಪೂರ್ಣಸಿದ್ಧವಾಗಿಲ್ಲ ಎಂಬ ಕಾರಣಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಮುಂದೂಡುವ ಎಲ್ಲ ಲಕ್ಷಣಗಳು ಗೋಚರಿಸಿದ್ದವು. ವಾಣಿಜ್ಯ ಉದ್ದೇಶದ ವಿಮಾನ ಹಾರಾಟಕ್ಕೆ ನಿಲ್ದಾಣ ಇನ್ನೂ ಸಮರ್ಪಕವಾಗಿ ಸಜ್ಜಾಗಿಲ್ಲವಾದ ಕಾರಣ ನಾಗರಿಕ ವಿಮಾನ ಇಲಾಖೆಯು ನೂತನ ನಿಲ್ದಾಣದ ಕಾರ್ಯಾರಂಭಕ್ಕೆ ಹಸಿರು ನಿಶಾನೆ ತೋರಿಸಲು ಹಿಂದೆಮುಂದೆ ನೋಡುತ್ತಿದೆ ಎಂಬ ಸುದ್ದಿ ಹಬ್ಬಿತ್ತು.
ಸಾರ್ವಜನಿಕರು ಯಾವುದೇ ಗಾಳಿಸುದ್ದಿಗೆ ಕಿವಿ ನೀಡಬಾರದೆಂದು. ನಿಗದಿಯಂತೆ ನಿಲ್ದಾಣ ಸಿದ್ಧಗೊಳ್ಳುತ್ತಿದೆ. ಅಂದುಕೊಂಡಂತೆ ಮಾರ್ಚ್ 30ರಿಂದ ವಿಮಾನಗಳು ಹಾರಾಟ ನಡೆಸಲಿವೆ ಎಂದು ಬ್ರೂನರ್ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ಮುಚ್ಚುವ ಚಿಂತನೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಎಚ್ಎಎಲ್ ನಿಲ್ದಾಣವನ್ನು ಉಳಿಸಿಕೊಳ್ಳಬೇಕೆಂದು ನಗರಕ್ಕೆ ಎರಡು ನಿಲ್ದಾಣಗಳ ಅಗತ್ಯವಿದೆಯೆಂದು ಅಲ್ಲಿನ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಎಚ್ಎಎಲ್ ವಿಮಾನ ನಿಲ್ದಾಣ ಮುಚ್ಚುವುದನ್ನು ತಡೆಯಬೇಕೆಂದು ಕೋರಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ತಳ್ಳಿಹಾಕಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.
(ದಟ್ಸ್‌ಕನ್ನಡ ವಾರ್ತೆ)
ಪೂರಕ ಓದಿಗೆ
ದೇವನಹಳ್ಳಿ ಅಂ.ವಿಮಾನನಿಲ್ದಾಣದ ಚಿತ್ರಗಳು


Click it and Unblock the Notifications
