ಮೊಬೈಲ್ ಫೋನ್ ಸಂಪರ್ಕದಲ್ಲಿ ಭಾರತದ ಕ್ರಾಂತಿ
ಮುಂಬೈ, ಫೆ.25: ಟೆಲಿಕಾಂ ಕ್ಷೇತ್ರದಲ್ಲಿ ಭಾರತ ಹೊಸ ದಾಖಲೆ ನಿರ್ಮಿಸಿದೆ. 2008ರ ಜನವರಿ ತಿಂಗಳೊಂದರಲ್ಲೇ ಹೊಸದಾಗಿ ಮೊಬೈಲ್ ಫೋನ್ ಸಂಪರ್ಕ ಪಡೆದ ಗ್ರಾಹಕರ ಸಂಖ್ಯೆ 8.77 ದಶಲಕ್ಷಕ್ಕೆ ಏರಿದೆ. ಇದೇ ಸಮಯದಲ್ಲಿ ಇದುವರೆವಿಗೂ ಅಗ್ರಸ್ಥಾನದಲ್ಲಿದ್ದ ಚೀನಾ ದೇಶದಲ್ಲಿ 8.42 ದಶಲಕ್ಷ ಗ್ರಾಹಕರು ಹೊಸ ಮೊಬೈಲ್ ಸಂಪರ್ಕ ಸಾಧಿಸಿದೆ.
ಡಿ.2007ರಲ್ಲಿ 8.11 ದಶಲಕ್ಷ ಮೊಬೈಲ್ ಗ್ರಾಹಕರು ಸಂಪರ್ಕ ಪಡೆದರೆ, ಜ.2008ರಲ್ಲಿ 8.74 ದಶಲಕ್ಷ ಗ್ರಾಹಕರು ಭಾರತದಲ್ಲಿ ಹೊಸ ಸಂಪರ್ಕ ಪಡೆದಿದ್ದಾರೆ. ಜ.2008ರ ವೇಳೆಗೆ ಭಾರತದಲ್ಲಿ ಒಟ್ಟು 281.62 ದಶಲಕ್ಷ ಮೊಬೈಲ್ ಫೋನ್ ಗ್ರಾಹಕರಿದ್ದರೆ, ಅದೇ ಡಿ.2007ರಲ್ಲಿ 272.88 ದಶಲಕ್ಷ ಗ್ರಾಹಕರು ಇದ್ದರು ಎಂದು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಸಲಹೆಗಾರರಾದ ಎಸ್.ಕೆ.ಗುಪ್ತಾ ತಿಳಿಸಿದರು.
ಭಾರತಿ ಏರ್‌ಟೆಲ್ ಲಿ.,ರಿಲಯನ್ಸ್ ಕಮ್ಯುನಿಕೇಷನ್ಸ್ ಲಿ., ಹಾಗೂ ವೊಡಫೋನ್ ಎಸ್ಸಾರ್ ಲಿ. ಕಂಪನಿಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತಯ ಶ್ರೇಯಾಂಕದಲ್ಲಿವೆ. ಜ. 2008ರಲ್ಲಿ ಈ ಕಂಪನಿಗಳ ಗ್ರಾಹಕರ ಸಂಖ್ಯೆ ಹೀಗಿದೆ. 2.3 ದಶಲಕ್ಷದಷ್ಟು ಗ್ರಾಹಕರು ಭಾರತಿ ಏರ್‌ಟೆಲ್‌ನ ಸಂಪರ್ಕ ಪಡೆದಿದ್ದಾರೆ. ಅದರ ಒಟ್ಟು ಗ್ರಾಹಕರ ಸಂಖ್ಯೆ 57.4 ದಶಲಕ್ಷ. ರಿಲಯನ್ಸ್ ಕಮ್ಯುನಿಕೇಷನ್ಸ್ ಲಿ. 1.6 ದಶಲಕ್ಷ ಹೊಸ ಗ್ರಾಹಕರಿಗೆ ಹೊಸ ಮೊಬೈಲ್ ಸಂಪರ್ಕ ಕೊಟ್ಟಿದೆ. ಅದರ ಒಟ್ಟು ಗ್ರಾಹಕರ ಸಂಖ್ಯೆ 42.6 ದಶಲಕ್ಷ. ವೊಡಫೋನ್ ಎಸ್ಸಾರ್ ಲಿ. 1.3 ದಶಲಕ್ಷ ಹೊಸ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದೆ. ಅದರ ಒಟ್ಟು ಗ್ರಾಹಕರ ಸಂಖ್ಯೆ 41.2 ದಶಲಕ್ಷ.
(ಏಜೆನ್ಸೀಸ್)


Click it and Unblock the Notifications
