ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರ ರಾತ್ರಿಯಿಂದ ಲಾರಿಗಳ ಭಾರೀ ಮುಷ್ಕರ

By Staff
|
Google Oneindia Kannada News

ಬೆಂಗಳೂರು, ಫೆ. 21 : ಸ್ಪೀಡ್ ಗವರ್ನರ್ ಅಳವಡಿಕೆ ವಿರೋಧಿಸಿ ರಾಜ್ಯದ ಲಾರಿ ಮಾಲೀಕರು ಏಜೆಂಟರು ಹಮ್ಮಿಕೊಂಡಿರುವ ಮುಷ್ಕರ 22 ರ ಶುಕ್ರವಾರ ಮಧ್ಯರಾತ್ರಿಯಿಂದ ಆರಂಭವಾಗಲಿದೆ. ಈ ನಿರ್ಧಾರದಿಂದಾಗಿ ರಾಜ್ಯದಲ್ಲಿರುವ ಲಾರಿ, ಖಾಸಗಿ ಬಸ್ಸು, ಮ್ಯಾಕ್ಸಿ ಕ್ಯಾಬ್ ಮುಂತಾದ ಒಟ್ಟು ಸುಮಾರು 7 ಲಕ್ಷ ವಾಹನಗಳ ಇಂಜಿನ್ ಒಟ್ಟಿಗೆ ಆಫ್ ಆಗುತ್ತವೆ. ಕಾರ್ಯಸಾಧುವಲ್ಲದ ಈ ವೇಗನಿಯಂತ್ರಕ ಆಜ್ಞೆಯನ್ನು ಹಿಂದಕ್ಕೆ ಪಡೆಯುವವರೆಗೆ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಲಾರಿ ಮಾಲಿಕರ ಒಕ್ಕೂಟದ ಕಾರ್ಯದರ್ಶಿ ನಾರಾಯಣಪ್ಪ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ವಸ್ತು ಮತ್ತು ಸೇವೆಗಳ ಸಾರಿಗೆ ಸರಬರಾಜಿಗೆ ಧಕ್ಕೆ ಉಂಟಾಗದು ಎಂದು ಲಾರಿ ಮಾಲೀಕರು ಹೇಳಿದ್ದಾರೆ. ಹಾಲು, ಹಣ್ಣು, ತರಕಾರಿ, ಔಷಧ ಮುಂತಾದ ಅತ್ಯಗತ್ಯ ಪದಾರ್ಥಗಳ ಸಾರಿಗೆ ಎಂದಿನಂತೆ ಸಾಗಲಿದೆ.

ಸ್ಪೀಡ್ ಗವರ್ನರ್ ಅಳವಡಿಕೆ ಆಜ್ಞೆ ಕರ್ನಾಟಕದಲ್ಲಿ ಜಾರಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ನೋಂದಾಯಿಸಿರುವ ವಾಹನಗಳಿಗೆ ಈ ಕಾನೂನು ಅನ್ವಯಿಸುತ್ತದೆ. ಆದರೆ, ನೆರೆ ರಾಜ್ಯಗಳಲ್ಲಿ ಈ ನಿಯಮ ಚಾಲ್ತಿಯಲ್ಲಿ ಇಲ್ಲವಾದುದರಿಂದ ವೇಗನಿಂತ್ರಕ ಅಳವಡಿಸದ ಆ ರಾಜ್ಯದ ವಾಹನಗಳು ನಮ್ಮ ರಾಜ್ಯದಲ್ಲಿ ಪ್ರವೇಶ ಮಾಡುವಂತಿಲ್ಲ. ಈ ಮುಷ್ಕರಕ್ಕೆ ತಮಿಳುನಾಡು ಲಾರಿ ಮಾಲೀಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಅಂತರರಾಜ್ಯ ಸರಕು ಸಾಗಣೆ, ಮ್ಯಾಕ್ಸಿ ಕ್ಯಾಬ್ ಚಲನವಲನಗಳು ಗಕ್ಕನೆ ನಿಂತು ಬಿಡುವಂತಾಗಿದೆ.

ಗುರುವಾರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹಾಗೂ ಸರಕಾರದ ನಡುವೆ ನಡೆದ ಮಾತುಕತೆಗಳು ವಿಫಲವಾದವು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀವತ್ಸಲಾವತ್ಸ ಅವರ ಪ್ರಕಾರ ಸರಕಾರ ಏನೂ ಮಾಡುವಂತಿಲ್ಲ. ಏಕೆಂದರೆ ವೇಗನಿಯಂತ್ರಕ ಅಳವಡಿಕೆ ಆಜ್ಞೆ ನ್ಯಾಯಾಲಯದಿಂದ ಬಂದಿದೆ. ಪರಿಸ್ಥಿತಿಯನ್ನು ಕಾರ್ಯದರ್ಶಿಗಳು ಎಷ್ಟೇ ವಿವರಿಸಿದರೂ ಕೂಡ ಲಾರಿ ಮತ್ತು ಏಜೆಂಟರು ತೃಪ್ತರಾಗದೆ ಮುಷ್ಕರ ಹೂಡುವುದಾಗಿ ಪಟ್ಟು ಹಿಡಿದು ಕುಳಿತಿದ್ದಾರೆ.

ಈ ಹಿಂದೆ ನಡೆದ ಎಲ್ಲ ಲಾರಿ ಮುಷ್ಕರಗಳಿಗಿಂತಲೂ ಉದ್ದೇಶಿತ ವೇಗನಿಯಂತ್ರಕ ವಿರೋಧಿ ಮುಷ್ಕರ ಪ್ರಬಲವಾಗಿದ್ದು ಮುಷ್ಕರದ ತಾಪಮಾನ ಹೆಚ್ಚಾಗಿರುತ್ತದೆ. ಪರೋಕ್ಷವಾಗಿ ಅಪರೋಕ್ಷವಾಗಿ ಜನಜೀವನದ ಮೇಲೆ ಈ ಹರತಾಳದ ದುಷ್ಪರಿಣಾಮ ತಟ್ಟುವುದು ಖಂಡಿತ.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X