ರಕ್ತತರ್ಪಣದೊಂದಿಗೆ ಪಾಕ್‌ನಲ್ಲಿ ಚುನಾವಣೆ ಆರಂಭ
ಇಸ್ಲಾಮಾಬಾದ್, ಫೆ.18: ಪಾಕಿಸ್ತಾನದಲ್ಲಿ ಸೋಮವಾರದಿಂದ ಸಾರ್ವತ್ರಿಕ ಚುನಾವಣೆಗಳು ಆರಂಭವಾಗಿವೆ. ಇಂದು ಮುಂಜಾನೆ ಲಾಹೋರ್‌ನ ಸ್ವಾತ್ ವ್ಯಾಲಿಯ ಮತಗಟ್ಟೆಯ ಬಳಿ ಅಪರಿಚಿತನೊಬ್ಬ ಗುಂಡು ಹಾರಿಸಿದ ಪರಿಣಾಮ ಪಿಎಂಎಲ್-ಎನ್ (ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಷರೀಫ್)ನ ಅಭ್ಯರ್ಥಿಯೊಬ್ಬನನ್ನು ಬಲಿ ತೆಗೆದುಕೊಂಡಿದೆ.
ಪಿಎಂಎಲ್-ಎನ್ ಅಭ್ಯರ್ಥಿ ಚೌದರಿ ಆಸೀಫ್ ಅಶ್ರಫ್ ಎಂಬವರೇ ಗುಂಡಿನ ದಾಳಿಯಲ್ಲಿ ಮೃತಪಟ್ಟವರು. ಅವರು ವಿಧಾನಸಭೆ ಚುನಾವಣೆಗೆ ಪಂಜಾಬ್ ಪ್ರಾಂತ್ಯದಿಂದ ಸ್ಪರ್ಧಿಸಿದ್ದರು. ಇಂದು ಮುಂಜಾನೆ ಅಪರಿಚಿತ ಬಂದೂಕುಧಾರಿಯೊಬ್ಬ ಆಸೀಫ್ ಅಶ್ರಫ್‌ನೆಡೆಗೆ ಗುಂಡುಹಾರಿಸಿದ. ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆ ತಲುಪಿದ ಸ್ವಲ್ಪ ಸಮಯದಲ್ಲೇ ಮೃತಪಟ್ಟರೆಂದು ಪಾಕಿಸ್ತಾನಿ ಮೂಲಗಳು ತಿಳಿಸಿವೆ.
ಇಂದು ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಅಶ್ರಫ್‌ರೊಂದಿಗೆ ಇತರೆ ಒಂಬತ್ತು ಪಿಎಂಎಲ್ ಕಾರ್ಯಕರ್ತರಿಗೂ ಗಾಯಗಳಾಗಿವೆ. ಈ ದಾಳಿಯಿಂದ ಲಾಹೋರ್ ನ ಕೆಲವೊಂದು ಕ್ಷೇತ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಜನ ಮತಗಟ್ಟೆಗೆ ಬಂದು ಓಟು ಹಾಕಲು ಹಿಂಜರಿದರು.
ಇಂದು ನಡೆದ ಗುಂಡಿನ ದಾಳಿಗೆ ಹಳೆಯ ದ್ವೇಷವೇ ಕಾರಣ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಪೊಲೀಸರು ತಿಳಿಸಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಚುನಾವಣೆಗಳು ತೃಪ್ತಿಕರವಾಗಿ ಸಾಗುತ್ತಿವೆ ಎಂದು ಪಾಕಿಸ್ತಾನದ ಮುಖ್ಯ ಚುನಾವಣಾ ಆಯುಕ್ತ ಖ್ವಾಜಿ ಮೊಹಮ್ಮದ್ ಫರೀಖ್ ತಿಳಿಸಿದ್ದಾರೆ.
(ಏಜೆನ್ಸೀಸ್)


Click it and Unblock the Notifications
