ಎಲ್ ಕೆ ಅಡ್ವಾಣಿಸಂಕಲ್ಪ ಯಾತ್ರೆಗೆ ಉಗ್ರರ ಬೆದರಿಕೆ
ನವದೆಹಲಿ, ಫೆ.5: ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಗುಜರಾಜ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಮೇಲೆ ಉಗ್ರವಾದಿಗಳು ಆತ್ಮಾಹುತಿ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಸಿದೆ.
ಕೇಂದ್ರ ಗೃಹ ಸಚಿವಾಲಯದ ತೀವ್ರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಬಿಜೆಪಿಯು ಅಡ್ವಾಣಿ ಅವರ ಎಲ್ಲಾ ಕಾರ್ಯಕ್ರಮಗಳನ್ನೂ ಅನಿರ್ದಿಷ್ಟಾವಧಿವರೆಗೆ ಮುಂದೂಡಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಸೋಮವಾರ ರಾತ್ರಿ ಅಡ್ವಾಣಿಅವರಿಗೆ ತಿಳಿಸಿ ಈ ಕುರಿತು ಚರ್ಚಿಸಿದ್ದರು.
ಉಗ್ರವಾದಿಗಳ ಬೆದರಿಕೆಯ ಹಿನ್ನಲೆಯಲ್ಲಿ ಫೆ.6ರಿಂದ ಪ್ರಾರಂಭವಾಗಬೇಕಿರುವ ಅಡ್ವಾಣಿಅವರ 'ಸಂಕಲ್ಪ ಯಾತ್ರೆ' ರದ್ದಾಗರುವ ಸಾಧ್ಯತೆಗಳಿವೆ. ದೇಶಾದ್ಯಂತ ಕೈಗೊಂಡಿರುವ 15 ತಿಂಗಳ ಕಾಲದ 'ಸಂಕಲ್ಪ ಯಾತ್ರೆ' ಮಧ್ಯಪ್ರದೇಶದ ಜಬಲ್ಪುರ್ನ ಸಾರ್ವಜನಿಕ ಸಭೆಯ ಮೂಲಕ ಆರಂಭವಾಗಬೇಕಿತ್ತು. ಅಡ್ವಾಣಿಅವರು ಬುಧವಾರದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಆದರೆ ಸಂಕಲ್ಪ ಯಾತ್ರೆ ಮುಂದುವರಿಸುವ ಬಗ್ಗೆ ಬಿಜೆಪಿ ಮೂಲಗಳು ಅನುಮಾನ ವ್ಯಕ್ತಪಡಿಸಿವೆ. ಒಂದು ವೇಳೆ ಸಂಕಲ್ಪಯಾತ್ರೆ ರದ್ದಾದರೆ, ದೇಶಕ್ಕೆ ಆಂತರಿಕ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಯುಪಿಎ ಸರ್ಕಾರದ ವಿರುದ್ಧ ಅವರು ಬೊಟ್ಟು ಮಾಡಿ ತೋರಬಹುದು.
(ಏಜೆನ್ಸೀಸ್)


Click it and Unblock the Notifications
