ಒಂದೇ ಕುಟುಂಬದ ಸರಣಿ ಹಂತಕರ ಬಂಧನ
ಬೆಂಗಳೂರು, ಜ.19: ನಿವೃತ್ತ ಬೆಸ್ಕಾಂ ಎಂಜಿನಿಯರ್ ಎಸ್.ವಿ.ರಾಘವನ್ ಸೇರಿದಂತೆ 21 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಂದೇ ಕುಟುಂಬದ ಮೂವರು ಕೊಲೆಗಡುಕರನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದ್ರಕಾಂತ್ ಎಸ್. ಶರ್ಮಾ(48), ಪತ್ನಿ ಹರ್ಷ(43) ಮತ್ತು ಮಗ ಮಾಂಟೋ ಸಿ. ಶರ್ಮಾ(21) ಬಂಧಿತ ಹಂತಕರು.
ಇತ್ತೀಚೆಗೆ ಬೆಂಗಳೂರಿನ ನಂಜಾಂಬ ಅಗ್ರಹಾರದಿಂದ ಕಾಣೆಯಾಗಿದ್ದ ಬೆಸ್ಕಾಂ ನಿವೃತ್ತ ಎಂಜಿನಿಯರ್ ಎಸ್.ವಿ. ರಾಘವನ್(62) ಕೊಲೆ ಪ್ರಕರಣದಲ್ಲಿ ಇವರು ಭಾಗಿಯಾಗಿರುವುದು ವಿಚಾರಣೆಯಲ್ಲಿ ಬಹಿರಂಗಗೊಂಡಿದೆ. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಚ್.ಬಿ.ಆರ್ ಬಡಾವಣೆಯಲ್ಲಿದ್ದ ತಮ್ಮ ಮನೆಯನ್ನು ರಾಘವನ್ ಅವರು ಶರ್ಮಾ ಕುಟುಂಬಕ್ಕೆ ಬಾಡಿಗೆಗೆ ನೀಡಿದ್ದರು.
ಜ.10 ರಂದು ಬಾಡಿಗೆ ವಸೂಲಿ ಮಾಡಲೆಂದು ಹೋಗಿದ್ದಾಗ, ರಾಘವನ್ ಆಸ್ತಿ ಲಪಟಾಯಿಸುವ ದುರುದ್ದೇಶದಿಂದ ಅವರನ್ನು ಅಪಹರಿಸಿದರು. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಕೊಲೆ ಮಾಡಿ, ಶವಕ್ಕೆ ಬೆಂಕಿ ಹಚ್ಚಿ ಸುಟ್ಟುಹಾಕಿ ತಲೆಮರೆಸಿಕೊಂಡಿದ್ದರು. ನಾಸಿಕ್ನಲ್ಲಿ ಸುಪಾರಿ ನೀಡಿ ಇಬ್ಬರ ಕೊಲೆ ಮಾಡಿಸಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ವಾಸವಿದ್ದ ಈ ಸರಣಿ ಹಂತಕರು ಮೊದಲು ಫೋಟೋ ಮತ್ತು ವಿಡಿಯೋ ಕವರೇಜ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರು ಸುಲಭವಾಗಿ ಹಣ ಗಳಿಸಲು ಹಲವಾರು ವಂಚನೆಗಳನ್ನೂ ಮಾಡಿದ್ದಾರೆ. ಐಸಿಐಸಿಐ ಬ್ಯಾಂಕಿನ ಚೆಕ್ ನೀಡಿ ಹಲವರಿಗೆ ವಂಚನೆ, ರಿಯಲ್ ಎಸ್ಟೇಟ್ ದಂಧೆ ನಡೆಸಿ ಹಲವರಿಗೆ ಕೋಟ್ಯಾಂತರ ರೂ. ಪಂಗನಾಮ, ಹೊರ ರಾಜ್ಯಗಳ ಶ್ರೀಮಂತಿರಿಗೆ ಜಮೀನು ತೋರಿಸಿ ಅವರಿಂದ ಮುಂಗಡ ಹಣ ಪಡೆದು ಮೋಸ ಮಾಡಿರುವುದು ಸೇರಿದಂತೆ ಒಟ್ಟು 15 ಕೋಟಿ ರೂ. ವಂಚಿಸಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಪತ್ತೆಯಾಗಿದೆ.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
