ಕ್ಯಾನ್ ಬೆರಾದಲ್ಲಿ ತಡೆಗೋಡೆಯ ಜನುಮದಿನ
ಕ್ಯಾನ್‌ಬೆರ್ರಾ, ಜ.11: ಭಾರತ ಕ್ರಿಕೆಟ್ ತಂಡದ ಕಲಾತ್ಮಕ ಆಟಗಾರ, ಮಾಜಿ ನಾಯಕ ಗೋಡೆ ರಾಹುಲ್ ದ್ರಾವಿಡ್‌ರ ಹುಟ್ಟುಹಬ್ಬ ಇಂದು.ಮೂವತ್ತೈದಾಯಿತು. ಮೂಲತಃ ಮಧ್ಯಪ್ರದೇಶದವರಾದ ರಾಹುಲ್ ಹುಟ್ಟಿದ್ದು ಇಂದೋರಿನಲ್ಲಿ. ಬೆಳೆದದ್ದು ಬೆಂಗಳೂರಿನಲ್ಲಿ.
ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಓದಿದ್ದು ವಾಣಿಜ್ಯ. ಆದರೆ ಇವರ ಲೆಕ್ಕ ಪುಸ್ತಕದಲ್ಲಿ ಜಮೆಯಾಗಿದ್ದು ಮಾತ್ರ ಬೌಲರುಗಳ ಬಾಂಬರ್ ಗಳನ್ನು ಠುಸ್ ಮಾಡುತ್ತಾ ಬಾರಿಸಿದ ರನ್ನುಗಳು, ಹಲವು ಶತಕಗಳು. ದ್ರಾವಿಡ್ ಇಂದು ಕ್ಯಾನ್‌ಬೆರ್ರಾ ಕ್ರೀಡಾಂಗಣದಲ್ಲಿ ತನ್ನ ಸಹ ಆಟಗಾರರ ಜೊತೆ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. australian capital territory ( act) ತಂಡದ ವಿರುದ್ಧದ ಎರಡನೆ ದಿನದಾಟ ಆರಂಭವಾಗುವ ಮುನ್ನ ಆಟಗಾರರು ರಾಹುಲ್ ದ್ರಾವಿಡ್‌ಗೆ ಹುಟ್ಟುಹಬ್ಬದ ಶುಭಾಷಯ ಕೋರಿದರು.
ಇವರ ಚೊಚ್ಚಲ ಟೆಸ್ಟ್ ಆರಂಭವಾಗಿದ್ದು ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ 1996ರಲ್ಲಿ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅದೇ ವರ್ಷ ಸಿಂಗಪೂರಿನಲ್ಲಿ ನಡೆದ ಸಿಂಗರ್ ಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಪಾದಾರ್ಪಣೆ ಮಾಡಿದರು. ವಿಸ್ಡನ್ ಸಂಸ್ಥೆಯು ಇವರನ್ನು 2000ನೇ ವರ್ಷದಲ್ಲಿ, ವರ್ಷದ ಕ್ರಿಕೆಟಿಗನೆಂದು ಪುರಸ್ಕರಿಸಿತು.
2004ರಲ್ಲಿ ಪದ್ಮಶ್ರೀ, 2004, ಸೆಪ್ಟೆಂಬರ್ 7ರಂದು ರಾಹುಲ್ ಐಸಿಸಿಯು ವರ್ಷದ ಆಟಗಾರನೆಂದೂ, ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರನೆಂದೂ ಗೌರವಿಸಿತು. 2004ರಲ್ಲಿ ಇವರು ಭಾರತ ತಂಡದ ಉಪನಾಯಕನಾಗಿಯೂ ಆಡಿದ್ದಾರೆ. ಹೀಗೆ ಮುಂದೆಯೂ ದ್ರಾವಿಡ್ ಕಲ್ಲುಬಂಡೆಯಂತೆ ನೆಲಕಚ್ಚಿ ಆಡುತ್ತಿರಲಿ. ಜರ್ಮನ್ ಗೋಡೆ ಆಗದಿರಲಿ !
(ದಟ್ಸ್‌ಕನ್ನಡ ವಾರ್ತೆ)


Click it and Unblock the Notifications
