ವಿದ್ಯಾರ್ಥಿನಿಗೆ ಪ್ರೇಮಪತ್ರ ಬರೆದ ಶಿಕ್ಷಕನಿಗೆ ತಕ್ಕ ಶಿಕ್ಷೆ
ರಾಮನಗರ, ಜ.11 : ವಿದ್ಯಾರ್ಥಿನಿಗೆ ಪಠ್ಯ ಕಲಿಸುವ ಬದಲು ಪ್ರೇಮಪತ್ರ ಬರೆದು ಸಿಕ್ಕಿಬಿದ್ದ ಶಿಕ್ಷಕನಿಗೆ ಗ್ರಾಮಸ್ಥರೇ ತಕ್ಕ ಪಾಠ ಕಲಿಸಿದ ಘಟನೆ ಬಿಡದಿ ತಾಲೂಕಿನ ಹರಳಾಳುಸಂದ್ರ ಗ್ರಾಮದಲ್ಲಿ ಜರುಗಿದೆ.
ಕೇವಲ ಆರು ತಿಂಗಳ ಹಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡ ದೇವರಾಜ್ ಒಂಬತ್ತನೇ ತರಗತಿಯ ಬಾಲೆಯ ಜೊತೆ ಕಾಮಣ್ಣನ ಲೀಲೆ ಪ್ರಾರಂಭಿಸಿದ್ದಾನೆ. ಮೊದಲು ಶುಭಾಶಯ ಪತ್ರಗಳನ್ನು ನೀಡಲು ಪ್ರಾರಂಭಿಸಿದ್ದಾನೆ. ವಿದ್ಯಾರ್ಥಿನಿಗೆ ಆತನ ಉದ್ದೇಶವೇನೆಂಬುದೇ ಅರ್ಥವಾಗಿಲ್ಲ.
ಯಾವಾಗ ಶುಭಾಶಯ ಪತ್ರಗಳ ಬದಲು ಪ್ರೇಮಪತ್ರ ನೀಡಿದ್ದಾನೋ ವಿದ್ಯಾರ್ಥಿನಿ ಬೆಚ್ಚಿಬಿದ್ದಿದ್ದಾಳೆ. ನೇರವಾಗಿ ಹೋಗಿ ತನ್ನ ಪಾಲಕರಿಗೆ ಸುದ್ದಿ ಮುಟ್ಟಿಸಿದ್ದಾಳೆ. ಕೆಂಡಾಮಂಡಲವಾದ ಬಾಲೆಯ ಚಿಕ್ಕಪ್ಪ ಹಳ್ಳಿಯ ಜನರೊಂದಿಗೆ ಬಂದು ಅ'ಶಿಕ್ಷಕ'ನನ್ನು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶೈಕ್ಷಣಿಕ ಪ್ರವಾಸ ಕೈಕೊಂಡಾಗ ಕೂಡ ವಿದ್ಯಾರ್ಥಿನಿಯನ್ನು ಗೋಳುಹೊಯ್ದುಕೊಂಡಿದ್ದ. ಹುಡುಗಿಯ ಚಿತ್ರಗಳನ್ನು ಮೊಬೈಲಲ್ಲಿ ತೆಗೆದು ಯಾವಾಗಲೂ ಅವನ್ನೇ ನೋಡುತ್ತ ವಿಕೃತ ಆನಂದ ಅನುಭವಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ. ಮಾಡಿದ ಕೃತ್ಯಕ್ಕಾಗಿ ಬ್ಲಾಕ್ ಶಿಕ್ಷಣಾಧಿಕಾರಿ ಆತನನ್ನು ಅಮಾನತಿನಲ್ಲಿಟ್ಟಿದ್ದಾರೆ.
(ಏಜೆನ್ಸಿ)


Click it and Unblock the Notifications
