ರುಪಾಯಿ ಹೆದರಿಕೆಯ ಬೆನ್ನಹಿಂದೆಯೇ ಇನ್ಫಿಗೆ ಬಾಂಬ್ ಬೆದರಿಕೆ
ಮುಂಬೈ, ಜ.11: ಇನ್ಫೋಸಿಸ್ ಸಂಸ್ಥೆ ಈ ಬಾರಿ ಎರಡು ಅಪಾಯಗಳಿಂದ ಪಾರಾಗಿದೆ. 1) ರುಪಾಯಿ ಮೌಲ್ಯವರ್ಧನೆಯ ಗುಮ್ಮನನ್ನು ನಿವಾರಿಸಿ ಆದಾಯ ಹೆಚ್ಚಿಸಿಕೊಂಡಿದೆ. 2) ಸಾಫ್ಟ್ ವೇರ್ ಕಂಪನಿಗಳನ್ನು ಸ್ಫೋಟಿಸುವುದಾಗಿ ಈ-ಮೇಲ್ ಬೆದರಿಕೆ ಒಡ್ಡುತ್ತಿದ್ದ ಚೆನ್ನೈ ಮೂಲದ ಇಂಜಿನಿಯರ್ ಇನ್ಫಿ ತ್ರೈಮಾಸಿಕ ವರದಿ ಹೊರಬೀಳುವ ದಿನವೇ ಪೊಲೀಸರಿಗೆ ಸಿಕ್ಕುಬಿದ್ದು ಒಳಗೆ ಹೋಗಿದ್ದಾನೆ.
ಸಾಫ್ಟ್‌ವೇರ್ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್ ಡಿ.31ಕ್ಕೆ ಕೊನೆಯಾದ ತನ್ನ ತ್ರೈಮಾಸಿಕ ಆದಾಯವನ್ನು ಶುಕ್ರವಾರ ಪ್ರಕಟಿಸಿದೆ. ಕಂಪನಿ ಶೇ. 25.22 ರಷ್ಟು ಲಾಭ ಗಳಿಸಿದೆ. ಕಂಪನಿಯ ಒಟ್ಟಾರೆ ಆದಾಯ ಎಲ್ಲಾ ತೆರಿಗೆಗಳೂ ಕಳೆದು 1,231 ಕೋಟಿ ರೂ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 983 ಕೋಟಿ ರೂ.ಗಳಾಗಿತ್ತು.
ಇನ್ಫೋಸಿಸ್ ತನ್ನ ನಿರೀಕ್ಷೆಯನ್ನೂ ಮೀರಿ ಶೇ. 11.9ರಷ್ಟು ಲಾಭ ಗಳಿಸಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕಂಪನಿಯ ಫಲಿತಾಂಶಗಳು ಷೇರುಪೇಟೆಯ ಮೇಲೂ ಪರಿಣಾಮ ಬೀರಿದ್ದು ಬೆಳಗಿನ ಪಾಳಿಯ ಷೇರುಪೇಟೆಯ ಸೂಚ್ಯಂಕ 228 ರಷ್ಟು ಏರಿಕೆ ಕಂಡಿದೆ. ಈ ತ್ರೈಮಾಸಿಕದಲ್ಲಿ ಕಂಪನಿಗೆ ಹಲವು ದಶಲಕ್ಷಗಳಲ್ಲಿ ವ್ಯಾಪಾರ ಒಪ್ಪಂದಗಳು ಕುದುರಿದ ಕಾರಣ ಮಾರುಕಟ್ಟೆಯಲ್ಲಿ ಈ ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಿಶ್ ಗೋಪಾಲಕೃಷ್ಣನ್ ತಿಳಿಸಿದ್ದಾರೆ.
ಸಿಕ್ಕಿ ಬಿದ್ದ 'ಈ-ಭಯೋತ್ಪಾದಕ':
ಇನ್ಫೋಸಿಸ್ ಸೇರಿದಂತೆ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳಿಗಳನ್ನು ಸ್ಪೋಟಿಸುವುದಾಗಿ ಈ-ಮೇಲ್‌ಗಳ ಮೂಲಕ ಬೆದರಿಕೆ ಒಡ್ಡುತ್ತಿದ್ದ ಇಂಜಿನಿಯರ್‌ನನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆದ ಈತ ಚೆನ್ನೈಯಿಂದ ಬೆದರಿಕೆ ಪತ್ರಗಳನ್ನು ಈ-ಮೇಲ್ ಮೂಲಕ ಕಳುಹಿಸುತ್ತಿದ್ದ. ಈ ಸಂಬಂಧ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ತನ್ನ ವಶಕ್ಕೆ ತೆಗೆದುಕೊಂಡಿದ್ದಾರೆ ವಿಚಾರಣೆ ಮುಂದುವರಿದಿದೆ.
(ಏಜನ್ಸೀಸ್)


Click it and Unblock the Notifications
