ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಂಡ್‌ಟ್ರಿ ನೆರಳಲಿ ಆಶ್ರಯಿಸಲು ಆಜ್‌‌ಟೆಕ್ ತುದಿಗಾಗಲಿ

By Staff
|
Google Oneindia Kannada News

ಬೆಂಗಳೂರು, ಜ.09 : ಸಾಫ್ಟ್‌ವೇರ್ ಕ್ಷೇತ್ರವೆಂಬ ಮರುಭೂಮಿಯಲಿ ಓಯಾಸಿಸ್‌ನ ಹುಡುಕಾಟದಲ್ಲಿದ್ದ ಆಜ್‌ಟೆಕ್ ಸಾಫ್ಟ್ ಸಾಫ್ಟ್‌ವೇರ್ ಕಂಪನಿ ಮೈಂಟ್ರಿ ಕನ್ಸಲ್ಟಿಂಗ್ ಅಡಿ ಆಶ್ರಯ ಪಡೆಯಲು ನಿರ್ಧರಿಸಿದೆ.

ಕಳೆದ ಕೆಲ ತ್ರೈಮಾಸಿಕಗಳಲ್ಲಿ ಮರಳುದಿಬ್ಬದ ಏಳುಬೀಳುಗಳಂತೆ ಆಜ್‌ಟೆಕ್ ಸಾಫ್ಟ್‌ನ ಆದಾಯ ಏರುಪೇರಾಗುತ್ತಿತ್ತು. 2006 ಡಿಸೆಂಬರ್‌ನಲ್ಲಿ ಅದರ ಪ್ರಮುಖ ಗ್ರಾಹಕ ಕಂಪನಿ ಡೆಂಡ್ರೈಟ್ ಸಂಸ್ಥೆ ಆಜ್‌ಟೆಕ್‌ನ ಸೇವೆಯಿಂದ ಹಿಂದೆ ಸರಿದನಂತರ ಅದರ ಆದಾಯ ಶೇ.40ರಷ್ಟು ಕುಸಿದಿತ್ತು. ಇದರಿಂದಾಗಿ ಭಾರತದ ಸಣ್ಣ ಉದ್ಯಮಿಗಳೊಂದಿಗೆ ಕೂಡಿಕೊಳ್ಳುವ ಹವಣಿಕೆಯಲ್ಲಿತ್ತು. ಆದರೆ, ಅದು ಸಾಧ್ಯವಾಗದೆ ಈಗ ಕಂಪನಿಯನ್ನೇ ಮಾರಾಟ ಮಾಡಿಬಿಡುವ ಕಸರತ್ತು ನಡೆಸಿದೆ.

ವಿಚಾರಿಸಿದರೆ ಆಜ್‌ಟೆಕ್ ಸಾಫ್ಟ್ ಮತ್ತು ಮೈಂಡ್‌ಟ್ರಿ ಕಂಪನಿಗಳೆರಡು ಈ ಬೆಳವಣಿಗೆಯ ಬಗ್ಗೆ ಬಾಯಿಬಿಡುತ್ತಿಲ್ಲ. ಇದೇ ಸಮಯದಲ್ಲಿ ಆಜ್‌ಟೆಕ್ ಇನ್ನಿತರ ಸಾಫ್ಟ್‌ವೇರ್ ಕಂಪನಿಗಳ ಜೊತೆ ಮಾತುಕತೆ ನಡೆಸುವ ಸಾಧ್ಯತೆಗಳಿದ್ದರೂ ಬಿಲಿಯನ್ ಡಾಲರ್ ಕಂಪನಿ ಕನಸು ಕಾಣುತ್ತಿರುವ ಮೈಂಡ್‌ಟ್ರಿಯ ಬುಟ್ಟಿಗೆ ಬೀಳುವುದು ಹೆಚ್ಚುಕಡಿಮೆ ಸ್ಪಷ್ಟವಾಗಿದೆ ಎಂದು ಸಾಫ್ಟ್‌ವೇರ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ಗಳಲ್ಲಿ ಕೇಂದ್ರ ಸ್ಥಾಪಿಸಿರುವ ಆಜ್‌ಟೆಕ್ ಸಾಫ್ಟ್‌ನಲ್ಲಿ 2100 ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು 89 ಕ್ಲೆಯೆಂಟುಗಳನ್ನು ಹೊಂದಿದೆ. 2007 ಹಣಕಾಸು ವರ್ಷದಲ್ಲಿ 264 ಕೋಟಿ ರು. ವ್ಯಾಪಾರ ವಹಿವಾಟನ್ನು ಆಜ್‌ಟೆಕ್ ಸಾಧಿಸಿದೆ. ಆಜ್‌ಟೆಕ್ ಮತ್ತು ಮೈಂಡ್‌ಟ್ರಿ ನಡುವೆ 500 ಕೋಟಿ ರು.ಗಳ ಒಪ್ಪಂದ ಕುದುರಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸಣ್ಣ ಮತ್ತು ಮಧ್ಯಮ ಮಟ್ಟದ ಕಂಪನಿಗಳ ನಡುವೆ ಏರ್ಪಟ್ಟಿರುವ ತುರುಸಿನ ಸ್ಪರ್ಧೆಯಲ್ಲಿ ಆಜ್‌ಟೆಕ್‌ಗೆ ಯಶಸ್ಸು ಮರೀಚಿಕೆಯಂತಾಗಿದೆ. ಇದರಿಂದಾಗಿಯೇ ಸಾಫ್ಟ್‌ವೇರ್ ಕ್ಷೇತ್ರದಿಂದ ನಿರ್ಗಮಿಸಲು ಆಜ್‌ಟೆಕ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

(ಏಜೆನ್ಸಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X