ಕನ್ನಡ ಚಳವಳಿಗಾರರಿಂದ ಆಸ್ಕರ್ ಫರ್ನಾಂಡಿಸ್ ಘೇರಾವ್
ಬೆಂಗಳೂರು, ಜ.08 : ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಕಳೆದ ಆರು ದಿನಗಳಿಂದ ಹೋರಾಟ ನಡೆಸುತ್ತಿರುವ ಕನ್ನಡ ಚಳವಳಿಗಾರರು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಆಸ್ಕರ್ ಫರ್ನಾಂಡಿಸ್ ಅವರನ್ನು ಘೇರಾವೊ ಮಾಡಿ ಕಪ್ಪು ಬಾವುಟ ತೋರಿಸಿದರು.
ರೈಲ್ವೆ ಇಲಾಖೆಯಲ್ಲಿ 'ಡಿ' ದರ್ಜೆ ಹುದ್ದೆಗಳಿಗೆ ನಡೆಸಲಾಗುತ್ತಿರುವ ಆಯ್ಕೆಯಲ್ಲಿ ಬಿಹಾರಿಗಳಿಗೆ ಮನ್ನಣೆಯಿತ್ತು ಕನ್ನಡಿಗರನ್ನು ಕಡೆಗಣಿಸಲಾಗುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ.
ಟೌನ್ ಹಾಲ್ ಮುಂದೆ ಧರಣಿ ನಡೆಸುತ್ತಿದ್ದ ಹೋರಾಟಗಾರರು, ಭಾರತೀಯ ರೈಲು ಇಲಾಖೆಯಲ್ಲಿ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು, ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಫರ್ನಾಂಡಿಸ್ಗೆ ಕಪ್ಪು ಬಾವುಟ ತೋರಿಸಿದರು. ಫರ್ನಾಂಡಿಸ್ ಟೌನ್ಹಾಲ್ನಿಂದ ಕಾರಿನಲ್ಲಿ ತೆರಳುತ್ತಿದ್ದಂತೆಯೇ 50ಕ್ಕೂ ಹೆಚ್ಚಿನ ಚಳವಳಿಗಾರರನ್ನು ಪೊಲೀಸರು ಬಂಧಿಸಿದರು.
ಏತನ್ಮಧ್ಯೆ, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗಾಗುತ್ತಿರುವ ಅನ್ಯಾಯದ ವಿರುದ್ಧ ಎದ್ದಿರುವ ಕೂಗಿಗೆ ಜಾತ್ಯತೀತ ಜನತಾದಳ ಬೆಂಬಲ ಸೂಚಿಸಿದೆ. ಚಳವಳಿಯ ಮುಂಚೂಣಿಯನ್ನು ವಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯನ್ನು ಶ್ಲಾಘಿಸಿದ ಜನತಾದಳದ ವಕ್ತಾರ ವೈಎಸ್ವಿ ದತ್ತ, ಬುಧವಾರದಿಂದ ಜಾತ್ಯತೀತ ಜನತಾದಳದ ಕಾರ್ಯಕರ್ತರೂ ಚಳವಳಿಯನ್ನು ಸೇರುತ್ತಾರೆ ಎಂದರು.
(ಯುಎನ್ಐ)


Click it and Unblock the Notifications
