ಗಂಡ ಹೆಂಡಿರ ಜಗಳ ಸಾವಿನ ತನಕ
ಮೈಸೂರು, ಜ.8: ಪೊಲೀಸ್ ಪೇದೆಯೊಬ್ಬ ಪತ್ನಿಯನ್ನು ಗುಂಡಿಕ್ಕಿ ಕೊಂದು ನಂತರ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಅರಮನೆ ನಗರಿಯಲ್ಲಿ ಸೋಮವಾರ ನಡೆದಿದೆ. ಈ ರೀತಿಯ ಘಟನೆಗಳು ಪದೇಪದೇ ಸಂಭವಿಸಿ 'ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ" ಎಂಬ ಗಾದೆ ಮಾತನ್ನೂ ಸುಳ್ಳು ಮಾಡುತ್ತಿವೆ.
ಪೊಲೀಸ್ ಮೂಲಗಳ ಪ್ರಕಾರ ಲೋಕೇಶ್(40) ನಿನ್ನೆ (ಜ.7)ರಾತ್ರಿ ಕೆಲಸಕ್ಕೆ ಹೋಗಿ ಇಂದು ಬೆಳಗ್ಗೆ ಮನೆಗೆ ಬಂದಿದ್ದಾನೆ. ಪತ್ನಿ ಸುಧಾ(36)ರೊಂದಿಗೆ ಜಗಳವಾಡಿ ನಂತರ ಪರಿಸ್ಥಿತಿ ತೀರಾ ವಿಕೋಪ ಹೋಗಿ ಆತ ತನ್ನ ಬಳಿ ಇದ್ದ ಗನ್‌ನಿಂದ ಗುಂಡು ಹಾರಿಸಿದ್ದಾನೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು, ನಂತರ ಭಯಬೀತನಾದ ಪ್ರಕಾಶ್ ಮೈಮೇಲೆ ಸೀಮೆಎಣ್ಣೆಯನ್ನು ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿ ಈಗ ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದೇಹದಲ್ಲಿ ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದು ಆತನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸಂದರ್ಭದಲ್ಲಿ ಅವರ ಮಗಳಾದ ಅಶ್ವಿನಿ(11) ಮನೆಯಲ್ಲಿ ಇರಲಿಲ್ಲ. ಹಾಲು ತರುವ ಸಲುವಾಗಿ ಅಂಗಡಿಗೆ ಹೋಗಿದ್ದಳು. ಲೋಕೇಶ್ ಅವರಿಗೆ ವಿಐಪಿಗಳಿಗೆ ಭದ್ರತೆ ಒದಗಿಸುವ ಕೆಲಸ ವಹಿಸಿದ್ದರಿಂದ ಗನ್ ನೀಡಲಾಗಿತ್ತು. ಈಗ ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಅಶ್ವಿನಿಯ ರೋದನ ಮುಗಿಲು ಮುಟ್ಟಿದೆ.
(ದಟ್ಸ್‌ಕನ್ನಡ ವಾರ್ತೆ)


Click it and Unblock the Notifications
