ಬರುವ ಏಪ್ರಿಲ್ ನಲ್ಲಿ ಜಾತಿ ಆಧಾರಿತ ಜನಗಣತಿ
ಬೆಂಗಳೂರು, ಜ. 8 : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿ ನಡೆಯಲಿದೆ. ಬರುವ ಏಪ್ರಿಲ್ ತಿಂಗಳಲ್ಲಿ ಈ ಜನಗಣತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಆಯೋಗದ ಅಧ್ಯಕ್ಷ ಸಿ. ಎಸ್. ದ್ವಾರಕಾನಾಥ್ ಹೇಳಿದ್ದಾರೆ.
ರಾಜ್ಯದಲ್ಲಿರುವ ಅನೇಕಾರು ಸಣ್ಣ ಪುಟ್ಟ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ಬಗೆಯ ಜನಗಣತಿಗೆ ಆಯೋಗ ಮುಂದಾಗಿದೆ. ಇಂಥ ಜನಗಣತಿಯಿಂದ ಚೂರುಪಾರು ಸಮುದಾಯಗಳ ಬಗೆಗೂ ಗಮನಹರಿಸಲು ಆಯೋಗಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಯೋಗದ ಅಂತಿಮ ವರದಿಯನ್ನು ಬರುವ ವರ್ಷದ ಆರಂಭಕ್ಕೆ ಸರಕಾರಕ್ಕೆ ಒಪ್ಪಿಸಲಾಗುವುದು ಎಂದೂ ಅವರು ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
1931ರ ನಂತರ ಕರ್ನಾಟಕ ರಾಜ್ಯವು ತನ್ನದೇ ಆದ ಜನಗಣತಿ ಕಾರ್ಯವನ್ನು ಮೊದಲಬಾರಿಗೆ ಮಾಡುತ್ತಿದೆ. ಈ ಜನಗಣತಿ ಪ್ರಾಯೋಗಿಕ ಮಾದರಿಯಲ್ಲಿರುತ್ತದೆ. ಇತರ ರಾಜ್ಯಗಳೂ ಸಹ ತಮ್ಮ ತಮ್ಮ ಜನಗಣತಿಯನ್ನು ತಾವೆ ಮಾಡುವ ದಿನಗಳು ದೂರವಿಲ್ಲ ಎಂದು ದ್ವಾರಕಾನಾಥ್ ನುಡಿದರು.
ಜನಗಣತಿ ಕೆಲಸಕ್ಕೆ ಕೇಂದ್ರ ಸರಕಾರದಿಂದ 22.5 ಕೋಟಿ ಹಾಗೂ ರಾಜ್ಯ ಸರಕಾರದಿಂದ 2 ಕೋಟಿ ಹಣ ಮಂಜೂರಾಗಿದೆ. ಜನಗಣತಿ ದಾಖಲೆ ಸಂಗ್ರಹಣೆ ಮತ್ತು ಪರಿಷ್ಕರಣೆಗೆ ಪ್ರಥಮಬಾರಿಗೆ ಸಿಂಪ್ಯೂಟರ್ ಬಳಸಲಾಗುತ್ತಿದೆ. ಬಿಇಎಲ್ ಉತ್ಪಾದನೆಯ ಸಿಂಪ್ಯೂಟರ್ ಗಳಿಗೆ ಅಗತ್ಯವಾದ ತಂತ್ರಾಂಶವನ್ನು ಸಿಎಂಸಿ ಟಾಟಾ ಒದಗಿಸಲಿದೆ.
(ದಟ್ಸ್ ಕನ್ನಡ ವಾರ್ತೆ)
ಸಿಂಪ್ಯೂಟರ್ ಎಂದರೆ ಏನು?


Click it and Unblock the Notifications
