ಗುಂಡಿನ ದಾಳಿಗೆ ಬೆನಜಿರ್ ಭುಟ್ಟೋ ಬಲಿ
ರಾವಳ್ಪಿಂಡಿ, ಡಿ.27 : ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋ ಅವರು ಗುಂಡಿನ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ.
ಗುರುವಾರ ಸಂಜೆ ರಾವಳ್ಪಿಂಡಿಯಲ್ಲಿ ಅಯೋಜಿಸಲಾಗಿದ್ದ ಸಾರ್ವಜನಿಕ ಚುನಾವಣಾ ಪ್ರಚಾರಸಭೆಯಲ್ಲಿ ಭಾಗವಹಿಸಿದ ನಂತರ ತೆರಳುತ್ತಿದ್ದಾಗ ಅವರ ಮೇಲೆ ಗುಂಡಿನ ಮಳೆ ಸುರಿಸಲಾಗಿದೆ. ಮೊದಲು ಕುತ್ತಿಗೆ ಮೇಲೆ ಗುಂಡು ಹಾರಿಸಲಾಗಿದ್ದು ನಂತರ ತಲೆಗೆ ಗುಂಡು ಹಾರಿಸಲಾಗಿದೆ. ಒಟ್ಟು ಐದು ಸುತ್ತು ಗುಂಡು ಹಾರಿಸಲಾಗಿದೆ.
ದಾಳಿಯಲ್ಲಿ ಗಾಯಗೊಂಡಿದ್ದ ಅವರನ್ನು ರಾವಳ್ಪಿಂಡಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರೆಂದು ಅವರ ಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ವಕ್ತಾರರು ದೃಢಪಡಸಿದ್ದಾರೆ. ಬೆನಜಿರ್ ಅವರ ಮೂವರು ಮಕ್ಕಳು ಸದ್ಯಕ್ಕೆ ದುಬೈನಲ್ಲಿ ಇದ್ದಾರೆ.
ಗುಂಡಿನ ದಾಳಿ ನಡೆಸಿದ ನಂತರ ದಾಳಿಕೋರರು ತಮ್ಮನ್ನು ತಾವೇ ಉಡಾಯಿಸಿಕೊಂಡಿದ್ದಾರೆ. ಈ ಆತ್ಮಹತ್ಯಾ ದಾಳಿಯಲ್ಲಿ 30ಕ್ಕೂ ಹೆಚ್ಚಿನ ಜನರು ಮೃತರಾಗಿದ್ದಾರೆ ಎಂದು ಪಾಕಿಸ್ತಾನದ ಟಿವಿ ವರದಿ ಮಾಡಿದೆ. ಯಾವ ಭಯೋತ್ಪಾದಕ ತಂಡ ಈ ದಾಳಿ ನಡೆಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅವರ ಕತ್ತಿನಲ್ಲಿ ಎರಡು ಗುಂಡುಗಳು ಹೊಕ್ಕಿದ್ದವೆಂದು ರಾವಳ್ಫಿಂಡಿ ಜನರಲ್ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪಿಪಿಪಿ ನಾಯಕರು ಈ ಕೃತ್ಯವನ್ನು ಖಂಡಿಸಿದ್ದು ಬೆನಜಿರ್ ಹುತಾತ್ಮರಾದರೆಂದು ಘೋಷಿಸಿದ್ದಾರೆ. ಭಾರತೀಯ ಕಾಲಮಾನ 18.46ಕ್ಕೆ ಅವರ ಮೇಲೆ ದಾಳಿ ಮಾಡಲಾಗಿದೆ.
ಹತ್ಯೆಗೀಡಾಗುತ್ತಿದ್ದಂತೆ ಮತ್ತೋರ್ವ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ಆದರೆ, ಈ ಹತ್ಯೆ ಕುರಿತಂತೆ ಪಾಕ್ ಅಧ್ಯಕ್ಷ ಮುಷ್ರಫ್ ಅವರು ಯಾವುದೇ ಹೇಳಿಕೆ ನೀಡಿಲ್ಲ. ಅವರು ಬೆನಜಿರ್ ಅವರಿಗೆ ಸೂಕ್ತ ಭದ್ರತೆ ನೀಡಿರಲಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ನವಾಜ್ ಷರೀಫ್ ಅವರು ನಡೆಸುತ್ತಿದ್ದ ರ್ಯಾಲಿಯ ಮೇಲೆಯೂ ದಾಳಿ ನಡೆಸಲಾಗಿದ್ದು ನಾಲ್ವರು ಸಾವಿಗೀಡಾಗಿದ್ದಾರೆ.
1979ರಲ್ಲಿ ಬೆನಜಿರ್ ಅವರ ತಂದೆ ಜುಲ್ಫಿಕರ್ ಭುಟ್ಟೋ ಅವರನ್ನು ಜಿಯಾ ಉಲ್ ಹಕ್ ಸರ್ಕಾರ ಗಲ್ಲಿಗೇರಿಸಿತ್ತು. ಬೆನಜಿರ್ ಅವರ ಸಹೋದರ ಮುರ್ತಾಜಾ ಭುಟ್ಟೋ ಕೂಡ ಹತ್ಯೆಗೀಡಾಗಿದ್ದರು. ಈಗ ಬೆನಜಿರ್ ದುರಂತದ ಸಾಲಿಗೆ ಸೇರಿದ್ದಾರೆ.
ಬೆನಜಿರ್ ಹತ್ಯೆಗೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ತೀವ್ರವಾಗಿ ಪ್ರತಿಕ್ರಿಯಿಸಿದ್ದು ಭಯೋತ್ಪಾದನೆಯನ್ನು ಹತ್ತಿಕ್ಕಬೇಕು ಎಂದು ಹೇಳಿದ್ದಾರೆ.


Click it and Unblock the Notifications
