ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇ ಭಾನುವಾರ ಬೆಂಗಳೂರಿನಲ್ಲಿ ಓಡುವವರ ನದಿ ಸಾಗರ

By Staff
|
Google Oneindia Kannada News

ಬೆಂಗಳೂರು, ಡಿ.13 : 26 ನಾನಾ ದೇಶಗಳ ನುರಿತ ಓಟಗಾರರು ಸೇರಿದಂತೆ ಹವ್ಯಾಸಕ್ಕಾಗಿ, ಆರೋಗ್ಯಕ್ಕಾಗಿ, ಸಂತೋಷಕ್ಕಾಗಿ ಮತ್ತು ಸೌಹಾರ್ದತೆಗಾಗಿ 20 ಸಾವಿರಕ್ಕೂ ಹೆಚ್ಚಿನ ಕ್ರೀಡಾಪಟುಗಳು 25 ಸಾವಿರ ಅಮೆರಿಕನ್ ಡಾಲರ್ ಬಹುಮಾನದ ಬಿಎಸ್ಎನ್ಎಲ್ - ಬೆಂಗಳೂರು ಅಂತಾರಾಷ್ಟ್ರೀಯ ಮ್ಯಾರಾಥಾನ್‌ನಲ್ಲಿ ಇದೇ ಭಾನುವಾರ ಓಡಲಿದ್ದಾರೆ.

ಯುವ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಈ ಬೃಹತ್ ಮ್ಯಾರಾಥನ್ ಹಮ್ಮಿಕೊಂಡಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವ ಜಿ.ಪರಮೇಶ್ವರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಮ್ಯಾರಥಾನ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು 7 ಸಾವಿರಕ್ಕೂ ಹೆಚ್ಚು ಕ್ರೀಡಾ ಉತ್ಸಾಹಿಗಳು ಜನ ನೊಂದಾಯಿಸಿದ್ದಾರೆ. ನೊಂದಾವಣೆ ಶನಿವಾರದವರೆಗೂ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಗೋಲ್ಡನ್ ಸ್ಟಾರ್ ಓಟ : ಕರ್ನಾಟಕದ ಹೆಸರಾಂತ ಕ್ರೀಡಾಪಟುಗಳಲ್ಲದೆ ಇನ್ಫೋಸಿಸ್, ವಿಪ್ರೋ, ಟೈಟನ್, ಜೆರಾಕ್ಸ್, ಸೀಮೆನ್ಸ್ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಘಟಾನುಘಟಿಗಳು ಟ್ರಾಕ್‌ಸೂಟ್ ಧರಿಸಿ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ಸಿನೆಮಾ ರಂಗದ ಗೋಲ್ಡನ್ ಸ್ಟಾರ್ ಗಣೇಶ್ ಇದರಲ್ಲಿ ಭಾಗವಹಿಸುತ್ತಿರುವುದು ಮ್ಯಾರಾಥಾನ್‌ಗೆ ಹೆಚ್ಚಿನ ಆಕರ್ಷಣೆ ತಂದಿದೆ ಎಂದು ಪರಮೇಶ್ವರ್ ಹೇಳಿದರು.

ಅರ್ಜುನ್ ಪ್ರಶಸ್ತಿ ವಿಜೇತ ಕೆನೆತ್ ಪಾವೆಲ್, ಓಲಿಂಪಿಕ್ ಹಾಕಿ ಆಟಗಾರ ಎಂ.ಪಿ.ಗಣೇಶ್, ಓಟಗಾರ್ತಿಯರಾದ ಅಶ್ವಿನಿ ನಾಚಪ್ಪ, ರೋಸಾ ಕುಟ್ಟಿ,, ಎಂ.ಕೆ.ಆಶಾ, ಅಂತಾರಾಷ್ಟ್ರೀಯ ಕ್ರೀಡಾಪಟು ಡೆವಿಡ್ ಪ್ರೇಮನಾಥ್, ಪದ್ಮಶ್ರೀ ಪ್ರಶಸ್ತಿ ವಿಜೇತೆ ಪ್ಯಾರಾಲಿಂಪಿಯನ್ ಮಾಲತಿ ಹೊಳ್ಳ ಮೊದಲಾದ ಖ್ಯಾತನಾಮರು ಭಾಗವಹಿಸುತ್ತಿರುವುದು ಮ್ಯಾರಥಾನ್‌ಗೆ ಹೆಚ್ಚಿನ ರಭಸವನ್ನು ತಂದಿದೆ ಎಂದು ಪರಮೇಶ್ವರ್ ಹರ್ಷವ್ಯಕ್ತಪಡಿಸಿದರು.

ಕೀನ್ಯಾ, ಇಥಿಯೋಪಿಯಾ, ಯುಗ್ಯಾಂಡಾ, ಯುನೈಟೆಡ್ ಕಿಂಗ್‌ಡಮ್, ಮೊರೊಕ್ಕೊ, ಮಲೇಶಿಯಾ, ಶ್ರೀಲಂಕಾ ಮತ್ತು ಇಂಡೋನೇಷಿಯಾದಿಂದಲೂ ಕ್ರೀಡಾಪಟುಗಳು ಈ ಮ್ಯಾರಾಥಾನ್‌ನಲ್ಲಿ ಓಡಲಿದ್ದಾರೆ. ಮ್ಯಾರಾಥಾನ್‌ಗೆ ಹೆಸರುವಾಸಿಯಾಗಿರುವ ಕೀನ್ಯಾದಿಂದ ಈಗಾಗಲೇ 11 ಮ್ಯಾರಾಥಾನ್‌ನಲ್ಲಿ ಭಾಗವಹಿಸಿರುವ ನಿರಾ ನ್ಯಾಗಾ, ಮಕಾವು ಜಿಯೋಕಾ ಮತ್ತು ಸುವಾ ಮುಟಿಸ್ಯಾ ಅವರು ಪಾಲ್ಗೊಳ್ಳಲಿದ್ದು ನಗರಕ್ಕೆ ಆಗಮಿಸಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಗೆದ್ದವರಿಗೆ ಭರ್ಜರಿ ಬಹುಮಾನ : 42.195 ಕಿ.ಮೀ.ನ ಫುಲ್ ಮ್ಯಾರಾಥಾನ್, 21.097 ಕಿ.ಮೀ.ನ ಹಾಫ್ ಮ್ಯಾರಾಥಾನ್, ಎನ್‌ಜಿಓ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗಾಗಿ 5 ಕಿ.ಮೀ., ಹಿರಿಯ ನಾಗರಿಕರಿಗಾಗಿ 5 ಕಿ.ಮೀ. ಮತ್ತು ವೀಲ್ ಚೇರ್‌ನ 2 ಕಿ.ಮೀ. ಓಟದ 5 ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ.

ಫುಲ್ ಮ್ಯಾರಾಥಾನ್‌ನಲ್ಲಿ ಗೆದ್ದವರು ಭರ್ಜರಿ 5 ಸಾವಿರ ಡಾಲರ್ ಮೊತ್ತವನ್ನು ಜೇಬಿಗಿಳಿಸಲಿದ್ದಾರೆ. ಹಾಫ್ ಮ್ಯಾರಾಥಾನ್ ವಿಜಯಿಗೆ 2 ಸಾವಿರ ಡಾಲರ್ ಮತ್ತು 6ನೇ ಸ್ಥಾನದವರೆಗೆ ಗೆದ್ದ ಪುರುಷ ಹಾಗು ಮಹಿಳೆಯರಿಗೂ ಭಾರೀ ಮೊತ್ತ ದಕ್ಕಲಿದೆ. ಅದಲ್ಲದೆ ರೆಕಾರ್ಡ್ ನಿರ್ಮಿಸಿದವರಿಗೆ ಬೋನಸ್ ಮೊತ್ತ ದೊರೆಯಲಿದೆ.

ಕೆಂಪೇಗೌಡ ಒಳಾಂಗಣ ಕ್ರೀಡಾಂಗಣದಿಂದ ಮ್ಯಾರಾಥಾನ್ ಪ್ರಾರಂಭವಾಗಲಿದೆ. ಬೆಳಿಗ್ಗೆ 6 ಗಂಟೆಗೆ ಶುರುವಾಗಿ ಸುಮಾರು 10.30 ಹೊತ್ತಿಗೆ ಅದೇ ಸ್ಥಳದಲ್ಲಿ ಸಮಾಪ್ತಿಯಾಗಲಿದೆ. ಪಾಲ್ಗೊಳ್ಳುವವರ ಸಹಾಯಕ್ಕೆಂದು ನೀರು, ತಿಂಡಿಯ ಪೊಟ್ಟಣ ಹಿಡಿದು 600ಕ್ಕೂ ಹೆಚ್ಚಿನ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಇದಲ್ಲದೆ, 6 ಆಂಬುಲನ್ಸ್ ಮತ್ತು ಪ್ಯಾರಾಮೆಡಿಕ್ ಸಿಬ್ಬಂದಿ ಓಟಗಾರರನ್ನು ಹಿಂಬಾಲಿಸಲಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ಫುಲ್ ಮತ್ತು ಹಾಫ್ ಮ್ಯಾರಾಥಾನ್ ಪಥ
ಹಿರಿಯರ ಮತ್ತು ಚಾರಿಟಿ ಮ್ಯಾರಾಥಾನ್ ಪಥ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X