ಪಾಕಿಸ್ತಾನದಿಂದ ಅಣ್ವಸ್ತ್ರ ಹೊತ್ತಯ್ಯಬಲ್ಲ ಕ್ಷಿಪಣಿ ಪರೀಕ್ಷೆ
ಇಸ್ಲಾಮಾಬಾದ್, ಡಿ.11 : ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಮಧ್ಯಮ ಶ್ರೇಣಿಯ ಕ್ಷಿಪಣಿಯನ್ನು ಪಾಕಿಸ್ತಾನ ಮಂಗಳವಾರ (ಡಿ.11) ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಬಬೂರ್ (ಹತಾಫ್ 7) ಕ್ಷಿಪಣಿ ವ್ಯಾಪ್ತಿ 700 ಕಿ.ಮೀಗಳೆಂದು ಸಚಿವಾಲಯದ ಮೂಲಗಳು ತಿಳಿಸಿವೆ. ಪ್ರಸಕ್ತ ವರ್ಷದ ಮಾರ್ಚ್ ಮತ್ತು ಜೂನ್ ತಿಂಗಳಲ್ಲಿ ಈ ಕ್ಷಿಪಣಿಯನ್ನು ಪರೀಕ್ಷಿಸಲಾಗಿತ್ತು. ಮೊದಲ ಬಾರಿಗೆ ಇದನ್ನು 2005ರಲ್ಲಿ ಪರೀಕ್ಷಿಸಲಾಗಿತ್ತು. ಆಗ ಇದರ ವ್ಯಾಪ್ತಿ 500 ಕಿ.ಮೀಗಳೆಂದು ತಿಳಿದುಬಂದಿದೆ.
ಕ್ಷಿಪಣಿ ಪರೀಕ್ಷೆಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದವಾಗಿದ್ದರೂ ಪಾಕಿಸ್ತಾನ ಕ್ಷಿಪಣಿ ಉಡಾವಣೆ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ತಿಳಿದುಬಂದಿದೆ. ಈ ಒಪ್ಪಂದವು ಖಂಡಾಂತರ ಕ್ಷಿಪಣಿಗೆ ಮಾತ್ರ ಅನ್ವಯಿಸುತ್ತದೆ ಆದರೆ ಮಧ್ಯಮಶ್ರೇಣಿ ಕ್ಷಿಪಣಿ ಉಡಾವಣೆಗೆ ಅಲ್ಲ ಎಂದು ಮೂಲಗಳು ತಿಳಿಸಿವೆ.
1998ರಿಂದಲೂ ಭಾರತ ಮತ್ತು ಪಾಕಿಸ್ತಾನ ಕ್ಷಿಪಣಿಗಳನ್ನು ಪರೀಕ್ಷಿಸುತ್ತಲೇ ಬಂದಿವೆ. ಫೆಬ್ರವರಿ ಮಾಹೆಯಲ್ಲಿ ಅನ್ವಸ್ತ್ರ ಆಯುಧಗಳ ಅವಘಡಗಳನ್ನು ತಡೆಗಟ್ಟಲು ಭಾರತ ಮತ್ತು ಪಾಕಿಸ್ತಾನ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದನ್ನು ಇಲ್ಲಿ ನೆನೆಸಿಕೊಳ್ಳಬಹುದು.
(ಏಜನ್ಸೀಸ್)


Click it and Unblock the Notifications
