• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ರಮ-ಸಕ್ರಮ : ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

By Staff
|

Cyriac Joseph, Chief Justice of Karnatakaಬೆಂಗಳೂರು, ಡಿ.11 : ಸರ್ಕಾರದ ಅಕ್ರಮ-ಸಕ್ರಮ ಯೋಜನೆಯಡಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಇನ್ನು ಕೇವಲ ಮೂರು ದಿನ ಉಳಿದಿರುವಾಗ ಯೋಜನೆಯನ್ನು 'ತಾತ್ಕಾಲಿಕವಾಗಿ ತಡೆಹಿಡಿದು' ರಾಜ್ಯ ಹೈಕೋರ್ಟ್ ಮಧ್ಯಂತರ ಆಜ್ಞೆ ಹೊರಡಿಸಿದೆ. ಮುಂದಿನ ವಿಚಾರಣೆಯನ್ನು 2008ರ ಫೆಬ್ರವರಿ 6ನೇ ತಾರೀಖಿಗೆ ನಿಗದಿಪಡಿಸಿದೆ.

ಮಧ್ಯಂತರ ಆದೇಶದಲ್ಲಿ ಈ ಯೋಜನೆಯಲ್ಲಿನ ಕುಂದುಕೊರತೆಗಳನ್ನು ನಿವಾರಿಸಿ, ಜನತೆಯ ಅಳಲನ್ನು ಆಲಿಸಿ ಮುಂದಿನ ಹೆಜ್ಜೆ ಇಡಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ಹೇಳಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನ್ಯಾಯಾಲಯ ವಿಸ್ತರಿಸಿದ್ದು 2008 ಮಾರ್ಚ್ 31ಕ್ಕೆ ನಿಗದಿಪಡಿಸಿದೆ. ಈ ಕಾನೂನಿನಿಂದಾಗಿ ಏನಾಗುವುದೋ ಏನೋ ಎಂಬ ಧಾವಂತದಲ್ಲಿದ್ದ ಬೆಂಗಳೂರಿನ ಜನತೆಗೆ ಈ ವಿಸ್ತರಣೆಯಿಂದಾಗಿ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದ್ದರಿಂದ ಕಂಗಾಲಾಗಿದ್ದ ಜನತೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಸರ್ಕಾರದ ಈ ಕಾನೂನನ್ನು ಹಿಂಪಡೆಯಬೇಕೆಂದು ಮನವಿ ಮಾಡಿಕೊಂಡಿತ್ತು. ಅಧಿಕಾರಿಗಳೊಂದಿಗೆ ಚರ್ಚಿಸಿದ್ದ ಠಾಕೂರ್ ಸರ್ಕಾರ ಹೈಕೋರ್ಟ್ ಆದೇಶಕ್ಕೆ ಬದ್ಧವಿರುವುದಾಗಿ ಹೊಣೆಗಾರಿಕೆಯನ್ನು ಹೈಕೋರ್ಟ್ ಮೇಲೆ ಹೊರಿಸಿದ್ದರು.

ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಕೇವಲ ಬೆರಳೆಣಿಕೆಯ ಜನತೆ ಮಾತ್ರ. ಕೆಲವರಿಗೆ ಈ ಯೋಜನೆ ಅರ್ಥವೂ ಆಗಿಲ್ಲ. ಇನ್ನು ಕೆಲವರಿಗೆ ತಲೆಯ ಮೇಲೆ ಆಕಾಶ ಕಳಚಿಬಿದ್ದಂತಿರುವ ಈ ಯೋಜನೆ ತೊಲಗಿದರೆ ಸಾಕಾಗಿದೆ. ಈ ಯೋಜನೆಯ ಅನುಷ್ಠಾನ ತಡೆಹಿಡಿಯಬೇಕೆಂದು ಕಾಂಗ್ರೆಸ್ ಪಕ್ಷದ ಸಮೇತ ನಗರದ ಜನತೆ ಬೀದಿಗಿಳಿದಿದ್ದಾರೆ. ನಗರದೆಲ್ಲೆಡೆ ಅವ್ಯಾಹತವಾಗಿ ಪ್ರತಿಭಟನೆಗಳು ನಡೆಯುತ್ತಿವೆ.

ಮಂಗಳೂರು ಸಿಟಿಜನ್ ಫೋರಂ ಮತ್ತು ಜೆ.ಪಿ.ನಗರ 7ನೇ ಮತ್ತು 8ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಪ್ರತ್ಯೇಕವಾಗಿ ಹೈಕೋರ್ಟ್ ಮುಂದೆ ಈ ಯೋಜನೆಯನ್ನು ತಡೆಹಿಡಿಯಬೇಕೆಂದು ಅರ್ಜಿ ಸಲ್ಲಿಸಿವೆ. ಅಕ್ರಮ-ಸಕ್ರಮವನ್ನು ವಿರೋಧಿಸದಿದ್ದರೂ ದಿನಾಂಕವನ್ನು ವಿಸ್ತರಿಸಬೇಕು ಮತ್ತು ದಂಡವನ್ನು ಕಡಿತಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದವು.

ಡಿಸೆಂಬರ್ 10ನೇ ತಾರೀಖಿನಂದು ವಾದ ಮತ್ತು ಪ್ರತಿವಾದವನ್ನು ಅಂತಿಮವಾಗಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ಜೋಸೆಫ್ ಸಿರಿಯಾಕ್ ಮತ್ತು ನ್ಯಾ.ಅಶೋಕ ಹಿಂಚಿಗೇರಿ ಇದ್ದ ವಿಭಾಗೀಯ ಪೀಠ ಮಂಗಳವಾರ ಮಧ್ಯಾನ್ಹ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡವರು ಕ್ಷಮೆಗೆ ಅನರ್ಹರು ಮತ್ತು ನಿಯಮ ಉಲ್ಲಂಘಿಸಿದ್ದಕ್ಕೆ ಬೆಲೆ ತೆರಬೇಕೆಂದು ತರಾಟೆಗೆ ತೆಗೆದುಕೊಂಡಿತ್ತು. ಜನತೆಗೆ ಇಕ್ಕಟ್ಟಿಗೆ ಸಿಕ್ಕಿಸಿರುವ ಈ ಕಾನೂನು ಮಂಡನೆಯಾಗುವಾಗ ಶಾಸಕರ್ಯಾರೂ ವಿರೋಧಿಸಲಿಲ್ಲವೇ ಎಂದು ರಾಜ್ಯದ ಜನಪ್ರತಿನಿಧಿಗಳ ಮೇಲೂ ಕೋರ್ಟ್ ಹರಿಹಾಯ್ದಿದೆ.

ಏನಿದು ಅಕ್ರಮ ಸಕ್ರಮ :

  • ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಅಂದರೆ ಆದರೆ ಇತ್ತೀಚೆಗೆ ರಚಿತವಾದ ಏಳು ನಗರಸಭೆಗಳ ಪ್ರದೇಶದಲ್ಲಿ ಬರುವ ಜನವಸತಿ ಕಟ್ಟಡಗಳ ಸಾಚಾತನದ ಪ್ರಶ್ನೆ. ಅಂದರೆ, ಬಿಡಿಎ ಅಥವಾ ಬಿಎಂಆರ್ಡಿ ಅನುಮತಿ ಇಲ್ಲದೆ ಈ ಭಾಗಗಳಲ್ಲಿ ನಿರ್ಮಾಣವಾದ ಕಟ್ಟಡಗಳ ನಿಯಮ ಉಲ್ಲಂಘನೆಯ ಪ್ರಮಾಣವೆಷ್ಟು ಎನ್ನುವ ಪ್ರಶ್ನೆ.
  • ಉಲ್ಲಂಘನೆಗೆ ಬೆಲೆಕಟ್ಟಿ ಅದನ್ನು ದಂಡವಿಧಿಸುವ ಮೂಲಕ ಸಾರ್ವಜನಿಕರಿಂದ ವಸೂಲು ಮಾಡುವ ಬೆಂಗಳೂರು ಮಹಾಪಾಲಿಕೆಯ ಇರಾದೆ.
  • ಫೆಬ್ರವರಿ 1972ರಿಂದ 2007ರ ಫೆಬ್ರವರಿ 3ರ ಒಳಗೆ ನಿರ್ಮಿತವಾದ ಎಲ್ಲ ಜನವಸತಿ ಮತ್ತು ಜನವಸತಿಯೇತರ ಕಟ್ಟಡಗಳು ಈ ಮೇಲೆ ತಿಳಿಸಿದ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತವೆ.
  • ಕಟ್ಟಡ ನಿರ್ಮಾಣದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದರೆ ಡಿಸೆಂಬರ್ 14ರೊಳಗೆ ಅರ್ಜಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಲ್ಲಿಸಬೇಕು.
  • ನಿಯಮ ಉಲ್ಲಂಘನೆಯಾಗಿದ್ದರೆ ನಿಗದಿತ ದಂಡವನ್ನು ಕಟ್ಟಿ ಕಟ್ಟಡವನ್ನು ಸಕ್ರಮಗೊಳಿಸಬೇಕು.
  • ನಿಗದಿತವಾಗಿ ತೆರಿಗೆಯನ್ನು ಕಟ್ಟುತ್ತಿದ್ದರೂ ಬಿಡಿಎ ಅಥವ ಬಿಎಮ್‌ಆರ್‌ಡಿಯಿಂದ ಅನುಮತಿ ಈ ಮೊದಲು ತೆಗೆದುಕೊಳ್ಳದಿದ್ದರೂ ಈ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತಾರೆ.
  • ಜನರ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡಲು ಬಿಬಿಎಂಪಿ ವಿಶೇಷ ಹಾಟ್‌ಲೈನ್‌ಗಳನ್ನು ತೆರೆದಿದೆ.
  • ಅಪಾರ್ಟ್‌ಮೆಂಟ್ ವಾಸಿಗಳಾಗಿದ್ದಲ್ಲಿ ಫ್ಲಾಟ್ ಮಾಲಿಕರು ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಅಸೋಸಿಯೇಷನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕು.

ಈವರೆಗೆ ಅರ್ಜಿ ಸಲ್ಲಿಸಿದವರು ಗುಣುಗುಡುತ್ತಲೇ ಮುಂದೆ ಎದುರಿಸಬೇಕಾಗಿರುವ ಪರಿಣಾಮಗಳಿಗೆ ಹೆದರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅನೇಕರು ನಿಯಮಗಳ ಮರ್ಮವನ್ನು ಅರಿಯದೇ ತಡಕಾಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಂದಲೂ ಮನದಟ್ಟಾಗುವ ವಿವರಣೆ ಸಿಗುತ್ತಿಲ್ಲವೆಂದು ದೂರುಗಳು ಬಂದಿವೆ. ಹಣ ಮಾಡಲು ಇದೇ ತಕ್ಕ ಸಮಯವೆಂದು ಚಪರಾಸಿಗಳ ಸಮೇತ ಅನೇಕರು ಜೇಬು ತುಂಬಿಸುವ ಕಾಯಕಕ್ಕೂ ಇಳಿದಿದ್ದಾರೆ ಎಂದು ನಾಗರಿಕರು ದೂರುತ್ತಿದ್ದಾರೆ.

ಸದ್ಯಕ್ಕಂತೂ ಉಚ್ಚ ನ್ಯಾಯಾಲಯದ ಈ ಆಜ್ಞೆಯಿಂದ ಜನತೆಗೆ ತಾತ್ಕಾಲಿಕವಾಗಿಯಾದರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ

'ಸಕ್ರಮ'ವೇ ಅಕ್ರಮ : ಸಾರ್ವಜನಿಕರ ದೂರು, ಕೋರ್ಟ್‌ಗೆ ಮೊರೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more