ರೌಡಿಗಳ 'ಬೇಡಿ ಕಳಚಿದ್ದ' ಸುಪರ್ಕಾಪ್ ಕಿರಣ್ ಬೇಡಿ ನಿವೃತ್ತಿ
ನವದೆಹಲಿ, ನ.27 : ಪುರುಷಪ್ರಧಾನ ಸಮಾಜದಲ್ಲಿ ಹದಗೆಟ್ಟ ವ್ಯವಸ್ಥೆಯ ವಿರುದ್ಧವೇ ಹೋರಾಡಿ ಗಟ್ಟಿಯಾಗಿ ನಿಂತ ಸುಪರ್‌ಕಾಪ್ ಕಿರಣ್ ಬೇಡಿ ಹತಾಶರಾಗಿದ್ದಾರೆ, ಸ್ವಯಂಪ್ರೇರಿತರಾಗಿ ಕೆಲಸದಿಂದ ವಿಶ್ರಾಂತಿ ಪಡೆಯಲು ಅನುವಾಗಿದ್ದಾರೆ.
ಕೆಲ ತಿಂಗಳ ಹಿಂದೆ ತಮಗಿಂತ ಕೆಳದರ್ಜೆಯ ಅಧಿಕಾರಿಯನ್ನು ತಮ್ಮ ತಲೆಯ ಮೇಲೆ ತಂದು ಕೂಡಿಸಿದಾಗ ಸಿಡಿದೆದ್ದು ನಂತರ ಒತ್ತಡಗಳಿಗೆ ಮಣಿದು ಕೆಳದರ್ಜೆಯಲ್ಲೇ ಕೆಲಸ ಮುಂದುವರಿಸಿದ್ದರು. ಅವರ ಅರ್ಜಿಯನ್ನು ಪರಿಗಣಿಸಿರುವ ಗೃಹ ಮಂತ್ರಾಲಯ ಮೇಲ್ದರ್ಜೆ ಮತ್ತೆ ನಿರಾಕರಿಸಿದ್ದಕ್ಕಾಗಿ ವಿಶ್ರಾಂತ ಜೀವನ ನಡೆಸಲು ವಿದ್ಯುಕ್ತರಾಗಿದ್ದಾರೆ ಎಂಬ ವದಂತಿಯನ್ನು ನಿರಾಕರಿಸಿದೆ.
ಸದ್ಯಕ್ಕೆ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಕಿರಣ್, ಮೂವತ್ತು ವರ್ಷಗಳ ಅವಿರತ ಸೇವೆಯ ನಂತರ ಭಾರತದ ಪ್ರಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ರಿಟೈರಾಗುವ ನಿರ್ಣಯಕ್ಕೆ ಬಂದಿದ್ದಾರೆ. ಹತ್ತು ದಿನಗಳ ಹಿಂದೆಯೇ ಅವರು ಅರ್ಜಿ ಸಲ್ಲಿಸಿದ್ದರು.
ಸಾಮಾಜಿಕ ಸೇವೆಗೆ ಮುಂದಿನ ಜೀವನವನ್ನು ಮುಡಿಪಾಗಿಡುವ ಉದ್ದೇಶದಿಂದ ಅವರು ನಿವೃತ್ತರಾಗುತ್ತಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದ್ದರೂ ದೆಹಲಿ ಪೊಲೀಸ್ ಕಮಿಷನರ್ ಹುದ್ದೆಯನ್ನು ಎರಡು ತಿಂಗಳ ಹಿಂದೆ ನಿರಾಕರಿಸಿದ್ದರಿಂದ ಮನನೊಂದು ನಿವೃತ್ತರಾಗುತ್ತಿದ್ದಾರೆಂದು ಸುದ್ದಿ ಎಲ್ಲೆಡೆ ಹಬ್ಬಿದೆ.
ರಾಜ್ಯದಲ್ಲಿ ಎಲ್ಲರಿಗಿಂತ ಸೀನಿಯರ್ ಆಗಿದ್ದರೂ ಅವರನ್ನು ಕಡೆಗಣಿಸಿ ವೈ.ಎಸ್. ದಧ್ವಾಲ್ ಅವರನ್ನು ನಗರದ ಪೊಲೀಸ್ ಕಮಿಷನರ್ ಆಗಿ ಸರ್ಕಾರ ನಿಯೋಜಿಸಿತ್ತು. ಇದನ್ನು ವಿರೋಧಿಸಿ ದೀರ್ಘಕಾಲದ ರಜಾ ಹಾಕಿದ್ದರು. ನಂತರ ಗೃಹಮಂತ್ರಿ ಶಿವರಾಜ್ ಪಾಟೀಲ್ ಅವರ ಮಾತಿಗೆ ಮನ್ನಣೆಯಿತ್ತು ಕೆಲಸಕ್ಕೆ ಮರಳಿದ್ದರು.
ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ ಕುಖ್ಯಾತ ಅಪರಾಧಿ ಚಾರ್ಲ್ಸ್ ಶೋಭರಾಜ್ ಇದ್ದ ತೀಹಾರ್ ಜೈಲನ್ನು ಪರಿವರ್ತನೆಯ ಗೂಡಾಗಿ ಪರಿವರ್ತಿಸಿದ್ದು ಮರೆಯಲು ಸಾಧ್ಯವೇ ಇಲ್ಲ. ವಿಶ್ವಸಂಸ್ಥೆಯಲ್ಲಿಯೂ ಅವರು ಈ ಮೊದಲು ಸೇವೆ ಸಲ್ಲಿಸಿದ್ದಾರೆ ಮತ್ತು ಮಿಜೋರಾಂನಲ್ಲಿಯೂ ಪೊಲೀಸ್ ಪಡೆಯ ಮುಖ್ಯಸ್ಥರಾಗಿ ಕರ್ತವ್ಯ ನಿಭಾಯಿಸಿದ್ದರು.
(ಯುಎನ್ಐ)


Click it and Unblock the Notifications
