ಮೂಡುಬಿದಿರೆ: ಡಿ.30ರಿಂದ ಅಳ್ವಾಸ್ ನುಡಿಸಿರಿ ಸಮ್ಮೇಳನ
ಮಂಗಳೂರು, ನ.27 : ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ 'ಅಳ್ವಾಸ್ ನುಡಿಸಿರಿ 2007' ನೆವೆಂಬರ್ 30ರಿಂದ ಮೂರುದಿನಗಳ ಕಾಲ ಮೂಡುಬಿದಿರೆಯ ಸಮೀಪದ ವಿದ್ಯಾಗಿರಿಯಲ್ಲಿ ನಡೆಯಲಿದೆ. ಈ ಉತ್ಸವದ ನೇರವರದಿ ದಟ್ಸ್‌ಕನ್ನಡದಲ್ಲಿ ಪ್ರಸಾರವಾಗಲಿದೆ.
ಡಿ ರತ್ನಮ್ಮ ನಗರದಲ್ಲಿರುವ ರತ್ನಾಕರವರ್ಣಿ ಸಭಾಂಗಣದಲ್ಲಿ ಜರುಗುವ ಈ ಸಮಾರಂಭವನ್ನು ಖ್ಯಾತ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ್ ಅವರು ಉದ್ಘಾಟಿಸಲಿದ್ದಾರೆ. ನಾಲ್ಕನೇ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಖ್ಯಾತ ನಿಘಂಟುಕಾರ ಜಿ.ವೆಂಕಟಸುಬ್ಬಯ್ಯ ಅವರು ವಹಿಸಲಿದ್ದಾರೆ. ಅಳ್ವಾಸ್ ಶಿಕ್ಷಣ ಫೌಂಡೇಷನ್ ನಡೆಸುತ್ತಿರುವ ಈ ಸಮಾರಂಭದ ವಿವರಗಳನ್ನು ಅದರ ಅಧ್ಯಕ್ಷರಾದ ಡಾ.ಮೋಹನ್ ಅಳ್ವಾ ಅವರು ದಟ್ಸ್ ಕನ್ನಡಕ್ಕೆ ನೀಡಿದರು. 'ಕನ್ನಡದ ಮನಸ್ಸು ಮತ್ತು ಸಾಹಿತ್ಯ ಜವಾಬ್ದಾರಿ' ಕುರಿತು ಸಮ್ಮೇಳನದಲ್ಲಿ ವಿಸ್ತೃತವಾಗಿ ಚರ್ಚೆಯಾಗಲಿದೆ ಎಂದರು.
ಈ ಸಮ್ಮೇಳನವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. 'ಸಾಹಿತ್ಯ ಸಾಮಾಜಿಕ ಜವಾಬ್ದಾರಿ'ಗಳು ಕುರಿತ ಮೊದಲ ವಿಚಾರ ಸಂಕಿರಣ ನವೆಂಬರ್ 30ರಂದು ನಡೆಯಲಿದೆ. ಇದರಲ್ಲಿ ಸಾಹಿತಿಗಳು ಹಳೆಯ ಕನ್ನಡ ಸಾಹಿತ್ಯ ಮತ್ತು ಹೊಸ ಕನ್ನಡ ಸಾಹಿತ್ಯ ಕುರಿತು ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಉಳಿದ ಸಂಕಿರಣಗಳಲ್ಲಿ ಸಾಹಿತ್ಯ ಶೈಕ್ಷಣಿಕ ಜವಾಬ್ದಾರಿಗಳು, ಸಾಹಿತ್ಯ ಸಾಂಸ್ಕೃತಿ ಜವಾಬ್ದಾರಿಗಳು, ಸುವರ್ಣ ಕರ್ನಾಟಕ ಅಭಿವೃದ್ಧಿ ಚಿಂತನೆ ಕುರಿತ ವಿಷಯಗಳು ಚರ್ಚೆಗೆ ಒಳಗಾಗಲಿವೆ.
ಕವಿ ಸಮಯ ಮತ್ತು ಕವಿ ನಮನ :ಇದೇ ಸಮ್ಮೇಳನದಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಡಾ.ಬಿ.ಎ.ಸನದಿ, ಡಾ.ಎಚ್.ಎಲ್.ಪುಷ್ಪಾ, ಕೃಷ್ಣಯ್ಯ ಅನಂತಪುರ, ಚಿದಾನಂದ ಸಾಲಿ, ಸುಕನ್ಯ ಮಾರುತಿ, ಸುಬ್ಬು ಹೊಳೆಯಾರ್, ಹರೀಷ್ ಕೇರ, ಜಿ.ಕೆ.ರವೀಂದ್ರಕುಮಾರ್ ಮತ್ತು ರಂಜಾನ್ ದರ್ಗಾ ಭಾಗವಹಿಸಲಿದ್ದಾರೆ. ಗತಿಸಿದ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿ, ಎಸ್.ವಿ.ಪರಮೇಶ್ವರ ಭಟ್ ಮತ್ತು ಪಿ.ಲಂಕೇಶ್ ಅವರನ್ನು ಸ್ಮರಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಅಳ್ವಾರ್ ನುಡಿಸಿರಿ ಪ್ರಶಸ್ತಿ : ವಿವಿಧ ಕ್ಷೇತ್ರಗಳಲ್ಲಿ ಕನ್ನಡದ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಸಾಧಕರಿಗೆ ಪ್ರಶಸ್ತಿಯನ್ನೂ ನೀಡಲಾಗುತ್ತಿದೆ. ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಇಂತಿದೆ:ಡಾ.ಮತ್ತೂರು ಕೃಷ್ಣಮೂರ್ತಿ (ಸಾಂಸ್ಕೃತಿಕ ಸೇವೆ), ಪ್ರೊ.ಎ.ಎಮ್.ಮಿತ್ರ (ಸಾಹಿತ್ಯ), ಕೆ.ಎಸ್.ಅಶ್ವತ್ಥ (ಚಲನಚಿತ್ರ), ಎಂ.ಬಿ.ಸಿಂಗ್ (ಪತ್ರಿಕೋದ್ಯಮ), ಬಿ.ಎಮ್.ಇದ್ದಿನಬ್ಬ (ಕನ್ನಡ ಹೋರಾಟ), ಡಾ.ಪಿ.ಎಸ್.ಶಂಕರ್ (ವೈದ್ಯಕೀಯ), ಆನಂದ ಗಾಣಿಗ (ನಾಟಕ ಸಂಘಟನೆ), ಪ್ರೊ.ಸುನೀತಾ ಶೆಟ್ಟಿ (ಹೊರನಾಡ ಕನ್ನಡ ಸೇವೆ), ಕರ್ನುರ್ ಕೊರಗಪ್ಪ (ಯಕ್ಷಗಾನ) ಮತ್ತು ಪ್ರೇಮಾ ಭಟ್ (ಸಾಹಿತ್ಯ).
ಇವುಗಳೊಂದಿಗೆ ವಿವಿಧ ವಿಶ್ವವಿದ್ಯಾಲಯಗಳ ಪ್ರಸಾರಾಂಗ ಇಲಾಖೆ, ಸಾಹಿತ್ಯ ಪರಿಷತ್, ಕರ್ನಾಟಕ ಸಾಹಿತ್ಯ ಅಕಾಡೆಮಿಗಳು ಪುಸ್ತಕ ಪ್ರೇಮಿಗಳಿಗೆ ರಸದೌತಣ ಬಡಿಸಲಿವೆ.
(ದಟ್ಸ್‌ಕನ್ನಡ ವಾರ್ತೆ)


Click it and Unblock the Notifications
