ಜಂಬೂ ಸವಾರಿ! ಹೊರಟಿದೆ ನೋಡೋಣ ಬಾರಾ
ಮೈಸೂರು, ಅ.21 : ಅರಮನೆ ನಗರ ಮೈಸೂರಿನಲ್ಲಿ 9ದಿನಗಳ ನವರಾತ್ರಿ ಉತ್ಸವದ ಸಡಗರ ಅಂತಿಮ ಹಂತ ತಲುಪಿದೆ. ಭಾನುವಾರ(ಅ.21) ವಿಜಯದಶಮಿ ಯ ದಿನ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಮೆರವಣಿಗೆ ಅನೇಕರ ಮನತಣಿಸ ಹೊರಟಿದೆ.
ಸುಮಾರು 2:20 ಗಂಟೆಗೆ ಮೈಸೂರಿನ ಅರಸ ಶ್ರೀಕಂಠದತ್ತ ಒಡೆಯರ್ ಹಾಗೂ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಚಾಮುಂಡೇಶ್ವರಿ ದೇವಿಯನ್ನು ನಮಸಿ, ಜಂಬೂ ಸವಾರಿ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ಐ ಎಂ ವಿಠಲ್ ಮೂರ್ತಿ, ದೂರದರ್ಶನದ ಮಹೇಶ್ ಜೋಶಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸುಮಾರು 240 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತ 50ವರ್ಷದಆನೆ ಬಲರಾಮ ತನ್ನ ಎಂದಿನ ಗಂಭೀರ ನಡೆಯಿಂದ 'ಜಂಬೂ ಸವಾರಿ ' ಗೆ ಮೆರಗು ನೀಡಿದೆ. ಬಲರಾಮನನ್ನು ನಿಯಂತ್ರಿಸಲು ಮಾವುತ ಚೆನ್ನಪ್ಪ ಸದಾ ಸಿದ್ಧನಾಗಿ ಕೂತಿದ್ದಾನೆ.
ಜಂಬೂ ಸವಾರಿ ಬನ್ನಿ ಮಂಟಪವನ್ನು ತಲುಪಲು ಸುಮಾರು ಗಂಟೆಗಳ ಕಾಲ ತೆಗೆದುಕೊಳ್ಳಲಿದೆ.
ಸ್ತಬ್ಧ ಚಿತ್ರ, ಜಾನಪದ ಕುಣಿತ, ಎಲ್ಲೆಡೆ ಸಂಭ್ರಮ:
ವಿಜಯದಶಮಿ ಮೆರವಣಿಗೆಯಲ್ಲಿ ನಾನಾ ಜಿಲ್ಲೆಗಳ ಒಟ್ಟು 26 ಸ್ತಬ್ಧಚಿತ್ರಗಳು, 55 ಕಲಾ ತಂಡಗಳು ಪಾಲ್ಗೊಂಡಿವೆ. ಡಾ. ರಾಜ್ ಕುಮಾರ್, ಶ್ರೀ ಶಿವಕುಮಾರ ಸ್ವಾಮೀಜಿ, ಸಂತೆಬೆನ್ನೂರಿನ ಪುಷ್ಕರಣಿ, ಕರ್ನಾಟಕ ವಿವಿ, ಕೇಂದ್ರ ರೇಷ್ಮೆ ಇಲಾಖೆ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ವಿಶ್ವ ಶಾಂತಿ ಸಂದೇಶ, ಧಾರವಾಡದ ಸಂಗೀತ, ಸಾಹಿತ್ಯ ದಿಗ್ಗಜರ ಕಲಾಕೃತಿ, ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯ ಚಾಮರಾಜೇಂದ್ರ ಒಡೆಯರ್ , ಮೈಸೂರಿನ ರಾಜ್ಯ ಲಾಂಛನ ಗಂಡಭೇರುಂಡ, ನಂದಿ ,ಭರತನಾಟ್ಯ ನೃತ್ಯ ಪ್ರಕಾರದ ಕಲಾಕೃತಿಗಳು ಈ ಬಾರಿಯ ಸ್ತಬ್ದ ಚಿತ್ರಗಳ ವಿಶೇಷವಾಗಿದೆ.
ಕೋಲಾಟ, ಜಗ್ಗಲಿಗೆ ಕುಣಿತ, ವೀರಗಾಸೆ, ಪೂಜಾ ಕುಣಿತ, ಸೋಮನ ಕುಣಿತ, ಹುಲಿವೇಷ, ವಿವಿಧ ರೀತಿಯ ಡೊಳ್ಳು ಕುಣಿತದ ಆಕರ್ಷಣೆಗೆ ಒಳಗಾದ ಪ್ರೇಕ್ಷಕರು ಮಂತ್ರಮುಗ್ದರಾಗಿ ವೀಕ್ಷಿಸುತ್ತಿದ್ದಾರೆ. ಮೈಸೂರಿನ ಖ್ಯಾತ ಮ್ಯೂಸಿಕ್ ಬ್ಯಾಂಡ್, ಕುದುರೆ ಟಾಂಗ, ಪೇಟಗಳು ಆಕರ್ಷಕವಾಗಿ ಗೋಚರಿಸುತ್ತಿದ್ದವು.
ಪತ್ನಿ ಸಮೇತರಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ರವರು ಜಂಬೂ ಸವಾರಿಯ ಮೆರವಣಿಗೆಯನ್ನು ಸವಿಯುತ್ತಿದ್ದಾರೆ.
ಇಂದು ಸಂಜೆ 6:30ಕ್ಕೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಸಮ್ಮುಖದಲ್ಲಿ ಪೊಲೀಸ್ ಅಶ್ವಾರೋಹಿ ದಳದಿಂದ ಪಂಜಿನ ಕವಾಯತು ಪ್ರದರ್ಶನ ದಿನದ ಇನ್ನೊಂದು ಆಕರ್ಷಣೆಯಾಗಿದೆ..
ವಿಶ್ವ ಪ್ರಸಿದ್ಧ ದಸರಾ ಮೆರವಣಿಗೆಯನ್ನು ಅಚ್ಚುಕಟ್ಟಿನಿಂದ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ಕಳೆದ ಒಂದು ವಾರದಿಂದ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಕರಿಂದ ಮೈಸೂರು ತುಂಬಿತುಳುಕುತ್ತಿದೆ. 20ಲಕ್ಷಕ್ಕೂ ಅಧಿಕ ಮಂದಿ ದಸರಾದ ವಿವಿಧ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
