ಕಾಂಗ್ರೆಸ್ ಪಕ್ಷದೊಂದಿಗೆ ಮತ್ತೆ ಕೈಜೋಡಿಸುವುದಿಲ್ಲ: ಜೆಡಿಎಸ್
ನವದೆಹಲಿ, ಅ.06 : ಕಾಂಗ್ರೆಸ್ ಜೊತೆ ಮತ್ತೆ ಕೈಜೋಡಿಸುವ ಸಾಧ್ಯತೆಯನ್ನು ಜೆಡಿಎಸ್ ಶನಿವಾರ(ಅ.6) ತಳ್ಳಿಹಾಕಿದೆ.
ಜೆಡಿಎಸ್ ಸಂಸದೀಯ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಜೆಡಿಎಸ್ ವಕ್ತಾರ ವೈ.ಎಸ್.ದತ್ತ, ಕಾಂಗ್ರೆಸ್ ಬಾಗಿಲು ಬಡಿಯುವ ಸ್ಥಿತಿಯಲ್ಲಿ ಜೆಡಿಎಸ್ ಇಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಸಮಾನ ಅಂತರವನ್ನು ಜೆಡಿಎಸ್ ಹೊಂದಲಿದೆ ಎಂದು ಹೇಳಿದರು.
ಹಿರಿಯ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಅವರು ಜೆಡಿಎಸ್ ನಂಬಿಕೆ ದ್ರೋಹ ಬಗೆದಿದೆ ಎಂದು ದೂರಿದ್ದಾರೆ. ಈ ಬಗ್ಗೆ ನೀವು ಏನು ಹೇಳುವಿರಿ ಎಂಬ ಸುದ್ದಿಗಾರರ ಪ್ರಶ್ನೆಗೆ, ಬಿಜೆಪಿ ಪಾಪದಲ್ಲಿ ಜೆಡಿಎಸ್ ಭಾಗಿಯಾಗಿ ತಪ್ಪು ಮಾಡಿದೆ. ಕಳೆದ 20ತಿಂಗಳಿಂದ ಮಾನಸಿಕ ಹಿಂಸೆಗೆ ಜೆಡಿಎಸ್ ಒಳಗಾಗಿದೆ. ಬಿಜೆಪಿ ಶೋಷಣೆಯಿಂದ ಜೆಡಿಎಸ್ ಬಳಲಿದೆ ಎಂದು ದತ್ತ ಹೇಳಿದರು.
ಕುಮಾರಸ್ವಾಮಿ ಪ್ರತಿಕ್ರಿಯೆ :
ಬಿಜೆಪಿ ನಿರ್ಣಯದಿಂದ ಬೇಸರವಾಗಿದೆ. ಈ ಹಿಂದೆ ಯಡಿಯೂರಪ್ಪ ಜೆಡಿಎಸ್ ಸೇರಲು ಮುಂದಾಗಿದ್ದರು. ನಾನು ಹೇಳಬೇಕಾದ ಸತ್ಯಗಳು ಎಷ್ಟೋ ಇವೆ. ಬಿಜೆಪಿಯಿಂದ ಅನುಭವಿಸಿದ ಮಾನಸಿಕ ಹಿಂಸೆ ನನಗಷ್ಟೇ ಗೊತ್ತು.
ಬಳ್ಳಾರಿ ಗಣಿ ಪ್ರಕರಣದಲ್ಲಿ ಬಿಜೆಪಿ ನಡೆದು ಕೊಂಡ ರೀತಿ ಮತ್ತು ಅಧಿಕಾರ ಹಸ್ತಾಂತರಕ್ಕೆ ಗಡುವು ನೀಡಿದ್ದು ನನಗೆ ನೋವು ತಂದಿದೆ. ಹೀಗಾಗಿಯೇ ನಾವು ಅಧಿಕಾರ ಹಸ್ತಾಂತರ ಮಾಡಲಿಲ್ಲ. ದೋಸ್ತಿ ಮುರಿಯಲು ಬಿಜೆಪಿ ಕಾರಣ. ನಾವು ಯಾರಿಗೂ ವಿಶ್ವಾಸ ದ್ರೋಹ ಮಾಡಿಲ್ಲ.
ಯಡಿಯೂರಪ್ಪ ಪ್ರತಿಕ್ರಿಯೆ :
ಭಾನುವಾರ(ಅ.7) ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಜೆಪಿ ಶಾಸಕರು, ಬೆಂಬಲ ವಾಪಸ್ ಪಡೆಯಲಿದ್ದಾರೆ. ತಂದೆ ಮಕ್ಕಳಿಂದ ಅಧಿಕಾರ ಹಸ್ತಾಂತರ ನಡೆಯಲಿಲ್ಲ. ಅ.18ರಿಂದ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಧರ್ಮ ಯುದ್ಧ ಆರಂಭವಾಗಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
