ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಸಾಹಿತ್ಯಲೋಕದ ಹೆಮ್ಮೆಯ ಅಲ್ಪಸಂಖ್ಯಾತ ಅಸ್ಪೃಶ್ಯ

By Staff
|
Google Oneindia Kannada News

Chidananda Murthy criticises conversion by Christiansಬೆಂಗಳೂರು, ಸೆಪ್ಟೆಂಬರ್ 07 : ಲಿಂಗಾಯತರ ಬಲವಂತ ಮತಾಂತರ ವಿರೋಧಿಸಿದ್ದಕ್ಕೆ ಮತ್ತು ಹಿಂದೂಗಳ ಮೇಲೆ ಮುಸ್ಲಿಂರಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಚಕಾರವೆತ್ತಿದ್ದಕ್ಕೆ ನನ್ನನ್ನು 'ಬಿಜೆಪಿ ದಾಸ', ಆರ್.ಎಸ್.ಎಸ್. ಸಾಹಿತಿ ಎಂದು ಟೀಕಿಸಲಾಗುತ್ತಿದೆ ಎಂದು ಸಾಹಿತಿ ಎಂ.ಚಿದಾನಂದ ಮೂರ್ತಿ ಹೇಳಿದ್ದಾರೆ.

ನಾನು ಇಂದು ಸಾಹಿತ್ಯಲೋಕದ ಹೆಮ್ಮೆಯ ಅಲ್ಪಸಂಖ್ಯಾತ ಅಸ್ಪೃಶ್ಯ ಹಿಂದೂ. ಆ ಬಗ್ಗೆ ಸಂಕೋಚವಿಲ್ಲ, ಭಯವಂತೂ ಇಲ್ಲವೇ ಇಲ್ಲ ಎಂದು ಚಿಮೂ ಮನದಾಳದ ಧ್ವನಿಯನ್ನು ಹೊರಬಿಟ್ಟಿದ್ದಾರೆ.

ಕರ್ನಾಟಕದ ಅನೇಕ ಜಿಲ್ಲೆಗಳಲ್ಲಾಗುತ್ತಿರುವ ಲಿಂಗಾಯತರ ಮತಾಂತರ, ಹಿಂದೂ ಸ್ಮಾರಕಗಳನ್ನು ದರ್ಗಾಗಳನ್ನಾಗಿ ಮಾಡುತ್ತಿರುವುದು ಮತ್ತು ಕನ್ನಡ ಕಟ್ಟಾಳುಗಳ ಹೇಡಿತನವನ್ನು ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಚಿಮೂ ಬಿಚ್ಚಿಟ್ಟರು.

ತಿರುಪತಿಯಲ್ಲಿ ಮಾತ್ರವಲ್ಲ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು, ಮೈಸುರುಗಳಲ್ಲಿ ಲಿಂಗಾಯತರನ್ನು ಕ್ರಿಶ್ಚಿಯನ್ನರು ಗುಪ್ತವಾಗಿ ಮತಾಂತರ ಮಾಡುತ್ತಿದ್ದಾರೆ. ಮತಾಂತರ ಮಾಡುತ್ತಿರುವ ಸುದ್ದಿಯನ್ನು ಸದರ್ನ್ ಬ್ಯಾಪ್ಟಿಸ್ಟ್ ಚರ್ಚ್ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ ಎಂದು ಚಿಮೂ ವಿವರಿಸಿದರು.

ಬೈಬಲ್ ಬಾಂಬ್ : 2002-03ರಲ್ಲಿ ಕರ್ನಾಟಕದಲ್ಲಿ ದೇವಾಲಯಗಳಿಂದ ಬಂದ 79 ಕೋಟಿ ಆದಾಯದಲ್ಲಿ ಶೇ.7.1ರಷ್ಟು ಹಣ ಹಿಂದೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ವ್ಯಯವಾಗುತ್ತಿದೆ. ಆದರೆ, ಚರ್ಚುಗಳಿಗೆ ಶೇ.12.75ರಷ್ಟು ಮತ್ತು ಮಸೀದಿ ಮದರಸಾ ಹಜ್ ಯಾತ್ರೆಗಳಿಗಾಗಿ ಶೇ.59.15ರಷ್ಟು ಹಣ ವ್ಯಯವಾಗುತ್ತಿದೆ. ಎಚ್ಎಎಲ್‌ನಲ್ಲಿಯೇ ಬೈಬಲ್ ವಿತರಣಾ ಕಾರ್ಯ ಅವ್ಯಾಹತವಾಗಿ ಸಾಗಿದೆ. ಉತ್ತರಹಳ್ಳಿ ಕ್ಷೇತ್ರದ ಹನುಮಗಿರಿಯ ಮೇಲೆ ಶಿಲುಬೆ ನೆಟ್ಟು ಅದನ್ನು 'ಶಿಲುಬೆ ಗುಡ್ಡ' ಎಂದು ಹೆಸರಿಸಲು ಹುನ್ನಾರ ನಡೆದಿದೆ. 'ಬೈಬಲ್ ಬಾಂಬ್' ಹಿಡಿದಿರುವ ಮಿಷನರಿಗಳೂ ಉಗ್ರರೇ ಎಂದು ಅವರು ಕಿಡಿಕಾರಿದರು.

ಮುಸ್ಲೀಮರಿಂದಲೂ ದಬ್ಬಾಳಿಕೆ : ಹಂಪಿ, ಇಟಗಿ, ಜೇಡರ ದಾಸಿಮಯ್ಯನ ಮುದೇನೂರು ಮುಂತಾದೆಡೆ ಹಿಂದೂ ಸ್ಮಾರಕಗಳನ್ನು ದರ್ಗಾಗಳನ್ನಾಗಿ ಮಾರ್ಪಡಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಸೇರಿಕೊಂಡಿರುವ ಉಗ್ರರು ದಕ್ಷಿಣ ಭಾರತವನ್ನು ಹೈದರಿಸ್ತಾನ್ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಬೆಂಗಳೂರಿನ ಮುಸ್ಲಿಂ ಪ್ರಾಬಲ್ಯವಿರುವ ಕೆಲ ಬಡಾವಣೆಗಳಲ್ಲಿ ಬಾಡಿಗೆಯನ್ನು ಮುಸ್ಲೀಂರಿಗೇ ಕೊಡಬೇಕು ಎಂದೂ ದಬ್ಬಾಳಿಸಲಾಗುತ್ತಿದೆ. ಇದನ್ನು ಸೆಕ್ಯುಲರಿಸ್ಟರು ಖಂಡಿಸದೇ ಜಾಣ ಮೌನವಹಿಸಿದ್ದಾರೆ. ಅದು ಅಕ್ಷಮ್ಯ ಎಂದು ಅವರು ನು‌ಡಿದರು.

ಸತ್ವರಹಿತ ಕನ್ನಡ ಸಾಹಿತ್ಯ ಪರಿಷತ್ತು : ಮೊದಲೇ ಸತ್ವ ಕಳೆದುಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು ಚಂದ್ರಶೇಖರ ಪಾಟೀಲರು ಅಧ್ಯಕ್ಷರಾದ ಮೇಲೆ ಅಧೋಗತಿಗಿಳಿದಿದೆ. ಅವರು ಬಂದ ಮೇಲೆ ಯಾವುದೇ ಉನ್ನತಮಟ್ಟದ ಸಾಹಿತ್ಯಿಕ ಚರ್ಚೆ, ವಿಚಾರಗೋಷ್ಠಿ ನಡೆದಿಲ್ಲ. ಪ್ರತಿಷ್ಠಿತ ಯೋಜನೆಯಾದ ಕನ್ನಡ ನಿಘಂಟು ಕಾರ್ಯಾಲಯ ಸಂಪೂರ್ಣ ಮುಚ್ಚಿದೆ. ಪರಿಷತ್ತು ಇಂದು ಕನ್ನಡಿಗರ, ಕನ್ನಡ ಸಾಹಿತ್ಯದ ಪ್ರತಿನಿಧಿಯಾಗಿ ಉಳಿದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬ್ಯಾರಿ ಅಕಾಡೆಮಿ ಬೇಕೆ? : ಕನ್ನಡ ಸಂಸ್ಕೃತಿ ಸಚಿವರಾದ ಮಹಾದೇವಪ್ಪನವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಚಿಸುವ ಭರವಸೆ ನೀಡಿರುವುದು ಸಾರಸ್ವತ ಲೋಕಕ್ಕೆ ಆಶ್ಚರ್ಯವನ್ನುಂಟು ಮಾಡಿದೆ. ಈ ಅಕಾಡೆಮಿಯ ಅಗತ್ಯವೇ ಇಲ್ಲ. ಬ್ಯಾರಿ ಹೆಸರಿನ ಅಲ್ಪಸಂಖ್ಯಾತ ಜನಾಂಗ ಮಂಗಳೂರಿನಲ್ಲಿ ಇರುವುದು ತಿಳಿದ್ದರೂ ಭಾಷೆಯ ಸ್ವರೂಪ, ಸಾಹಿತ್ಯದ ಅರಿವು ಯಾರಿಗೂ ಇಲ್ಲ. ಒಂದು ಭಾಷೆಗೆ ಸಾಹಿತ್ಯ ಅಕಾಡೆಮಿ ದೊರಕಬೇಕಾದರೆ ಅದು ಸಾಕಷ್ಟು ಪ್ರಬುದ್ಧವಾಗಿರಬೇಕು.

ಬ್ಯಾರಿ ಅಕಾಡೆಮಿ ವಿಷಯ ಕೈಬಿಡಬೇಕೆಂದು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಎಲ್.ಎಸ್.ಶೇಷಗಿರಿರಾವ್, ಎನ್.ಬಸವಾರಾಧ್ಯ, ಜಿ.ಎಸ್.ಸಿದ್ದಲಿಂಗಯ್ಯ, ಸಾ.ಶಿ.ಮರುಳಯ್ಯ, ಸುಮತೀಂದ್ರ ನಾಡಿಗ್, ವಿಜಯಾ ಮತ್ತು ನಾನು ಎಲ್ಲ ಸೇರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಪತ್ರದ ಮುಖಾಂತರ ಒತ್ತಾಯಿಸಿದ್ದೇವೆ. ಆಶ್ಚರ್ಯಕರ ಸಂಗತಿಯೆಂದರೆ ಪರಿಷತ್ತಿನ ಅಧ್ಯಕ್ಷರಾದ ಚಂಪಾ ಅವರು ಕೂಡ ಈ ಅಕಾಡೆಮಿಯ ಸ್ಥಾಪನೆಯನ್ನು ವಿರೋಧಿಸಬೇಕಿತ್ತು ಇದು ವಿಷಾದನೀಯ ಎಂದು ಚಿದಾನಂದ ಮೂರ್ತಿ ಆಕ್ರೋಷ ವ್ಯಕ್ತಪಡಿಸಿದರು.

ಅದಲ್ಲದೆ ಮತಾಂತರ ಮಾಡುತ್ತಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಕ್ಕಾಗಿ ಹಿಂದೂಗಳಿಂದ ಕ್ರಿಶ್ಚಿಯನ್ನರಿಗೆ ಅನ್ಯಾಯವಾಗಿದೆ ಎಂದು ಸಾಂಗ್ಲಿಯಾನಾ ನೇತೃತ್ವದಲ್ಲಿ ಇದೇ ತಿಂಗಳ ಕೊನೆಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X