ಇದು ಕರ್ನಾಟಕ ಕಂಡ ಅದ್ಧೂರಿ ಹುಟ್ಟುಹಬ್ಬದ ಸಮಾರಂಭ!
ಬೆಂಗಳೂರು, ಆಗಸ್ಟ್ 02 : ಮುಖ್ಯಮಂತ್ರಿಗಳ ವಿರುದ್ಧ ಗುರ್ ಎಂದು ಸಚಿವ ಸ್ಥಾನ ಕಳೆದುಕೊಂಡ ಶಾಸಕ ಜಮೀರ್ ಅಹಮದ್ ಖಾನ್ ಅವರ ಹುಟ್ಟುಹಬ್ಬ, ಅನೇಕ ಕಾರಣಗಳಿಂದ ಗಮನಾರ್ಹ. ನೀವು ಸಮಾರಂಭಕ್ಕೆ ಬಂದಿದ್ದಿದ್ದರೆ ಅಬ್ಬಬ್ಬ ಎಂಬ ಮಾತು ನಿಮ್ಮ ಬಾಯಿಂದ ಬರುತ್ತಿತ್ತು!
ಹುಟ್ಟುಹಬ್ಬದ ಸಮಾರಂಭ ಮುಗಿದರೂ, ಅಲ್ಲಿದ್ದ ಕೇಕ್ ಬಗೆಗಿನ ಚರ್ಚೆ ಗುರುವಾರವೂ ಮುಂದುವರೆದಿದೆ. ಅದು ಅಂತಿಂಥ ಕೇಕ್ ಅಲ್ಲ ಬಿಡಿ. ಅದರ ತೂಕ ಸುಮಾರು 1,500 ಕೆ.ಜಿ ಅಷ್ಟೇ! 24 ಅಡಿ ಅಗಲ, 34ಅಡಿ ಉದ್ದದ ಕೇಕ್ ಕತ್ತರಿಸಿ, ಜಮೀರ್ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಕ್ರಿಕೆಟಿಗ ಅಜರುದ್ದೀನ್ ಅವರಿಗೆ ಜಮೀರ್ ಕೇಕ್ ತಿನ್ನಿಸಿದರು. ಅಂದ ಹಾಗೇ ಈ ಕೇಕ್ ಲಿಮ್ಕಾ ದಾಖಲೆ ಸೇರುವ ಅವಕಾಶಗಳಿವೆ.
ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದ 15ಸಾವಿರ ಜನರು ಊಟ ಮಾಡಿ, ತೃಪ್ತಿಯಿಂದ ತೇಗಿದರು. 3 ಸಾವಿರ ಬಡವರಿಗೆ, ತಲಾ 10ಕೆ.ಜಿ. ಅಕ್ಕಿಯನ್ನು ವಿತರಿಸಲಾಯಿತು. 1500 ವಿದ್ಯಾರ್ಥಿಗಳಿಗೆ ಗಡಿಯಾರವನ್ನು ಜಮೀರ್ ವಿತರಿಸಿದರು.
ಈ ಹುಟ್ಟುಹಬ್ಬದ ಇನ್ನೊಂದು ವಿಶೇಷವೆಂದರೆ, ಹಿಂದೂ ಪುರೋಹಿತರು ಶ್ಲೋಕಗಳನ್ನು ಹೇಳಿದರು.
ಎಲ್ಲಾ ನೋಡಿದಾಗ ನೆನಪಾಗುವ ಗಾದೆ: ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ! ಈ ಗಾದೆ ಬಳಕೆ ಬಗ್ಗೆ ನಿಮ್ಮದೇನಾದರೂ ತಗಾದೆ ಇದೆಯಾ? ಇದ್ದರೇ ಎರಡು ಸಾಲು ಬರೆಯಬಹುದು!
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications