ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ರಾಜ್ಯ ಸರ್ಕಾರಿ ನೌಕರರಿಗೆ ಹಬ್ಬ!ಜನರಿಗೆ?

By Staff
|
Google Oneindia Kannada News

ನೌಕರರು ಸಮ್ಮೇಳನದ ಸಂಭ್ರಮದಲ್ಲಿರುವುದರಿಂದ ಸರಕಾರಕ್ಕೆ ಸಂಬಂಧಿಸಿದ ಯಾವ ಕಚೇರಿಯಲ್ಲೂ 3ಕಾಸಿನ ಕೆಲಸ ನಡೆಯುವುದಿಲ್ಲ. ಜುಲೈ 21ರ ಶನಿವಾರ ಒಂದು ರೀತಿ ಅನಧಿಕೃತ ರಜೆ ಸ್ಥಾಪಿತವಾಗಿರುವುದರ ಕಾರಣ ನೀವು ಸರಕಾರದ ಯಾವ ಕಚೇರಿಗೂ ಹೋಗಬಾರದೆಂದು ಈ ಮುಖಾಂತರ ತಿಳಿಸಲಾಗಿದೆ.

  • ದಟ್ಸ್ ಕನ್ನಡ ನ್ಯೂಸ್ ಡೆಸ್ಕ್
ಬೆಂಗಳೂರು, ಜುಲೈ 20:ಬಡ್ತಿ, ವರ್ಗಾವಣೆ, ತಮಗನುಕೂಲವಾಗುವ ಸ್ಥಾನಕ್ಕೆ ನೇಮಕ ಮುಂತಾದ ವೈಯಕ್ತಿಕ ಬೇಡಿಕೆಗಳ ಈಡೇರಿಕೆಗೆ ನಮ್ಮ ಸರಕಾರಿ ನೌಕರರು ವಶೀಲಿಬಾಜಿ ಮಾಡುವುದು ಖರೆ. ಇದು ನಮ್ಮ ರಾಜ್ಯದಲ್ಲಿ ಒಂದು ಪದ್ಧತಿ. ಅದಕ್ಕೋಸ್ಕರ ಮಾಡಬೇಕಾದ ಆಫೀಸಿನ ಕೆಲಸಗಳನ್ನು ತೊರೆದು ಸ್ವಂತ ಆಕಾಂಕ್ಷೆ ಈಡೇರಿಕೆಗಾಗಿ ಕಚೇರಿಯಿಂದ ಕಚೇರಿಗೆ ಅವರೆಲ್ಲ ಅಲೆದಾಡುವುದು ವಾಡಿಕೆ. ಬೆಳಗ್ಗೆ ಅಟೆಂಡೆನ್ಸ್ ಹಾಕಿ ವಿಧಾನಸೌಧದ ಕಡೆ ಹೊರಟುಬಿಟ್ಟರೆ ಅವರಿಗೆ ಅವತ್ತಿನ ಕೆಲಸ ಮುಗೀತು.

ಇಂಥವರನ್ನು ನಂಬಿ ಫೈಲು ಮುಂದೆ ಹೋಗತ್ತೆ ಅಂತ ಕಚೇರಿಗೆ ಬಂದ ನಾಗರೀಕರು ಚಪ್ಪಲಿ ಸವೆಸಿಕೊಂಡು ವಾಪಾಸು ಹೋಗುವುದೂ ವಾಡಿಕೆ. ನಮ್ಮಲ್ಲಿ ಯಾರಿಗೂ ವಿಷಾದವಿಲ್ಲ. ಕಾರಣ, ಆವತ್ತಿನ ಕೆಲಸ ಆವತ್ತೆ ಆಗದಿರುವುದು ಗೌರ್ನಮೆಂಟ್‌ ಕಚೇರಿಗಳಲ್ಲಿ ಯಾವತ್ತಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಅಂತ ಇಡೀ ಪ್ರಪಂಚಕ್ಕೇ ಗೊತ್ತು.

ಎಷ್ಟೋ ಮಂದಿ ಕರ್ನಾಟಕ ಸರಕಾರದ ನೌಕರರು ತಮ್ಮ ಆಫೀಸಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ವೇತನ ಆಯೋಗಗಳ ಶಿಫಾರಸ್ಸು ಜಾರಿ ಮುಂತಾದ ಸಾಮೂಹಿಕ ಬೇಡಿಕೆಗಳಿಗೆ ಹರತಾಳ ಮಾಡುವುದೂ ಒಂದು ಸಂಪ್ರದಾಯ. ಇತ್ತೀಚಿನ ವರ್ಷಗಳಲ್ಲಿ ಆಗಿಂದ್ದಾಗ್ಗೆ ಡಿಎ ಹೆಚ್ಚಾಗುತ್ತಿರುವುದರಿಂದ ಮತ್ತು ನೌಕರರ ಸಂಘಗಳಲ್ಲಿ ಪದಾದಿಕಾರಿಗಳಾದವರಿಗೆ ಹೋರಾಟದ ನರಗಳು ಸೊರಗಿರುವುದರಿಂದ ಅಂಥ ಮುಷ್ಕರಗಳು ಕಮ್ಮಿಯಾಗಿವೆ.

ಯಾವಾಗಲೂ ಸರಕಾರವನ್ನು ನಿಂದಿಸುತ್ತಾ, ಜನರಿಗೆ ತೊಂದರೆ ಕೊಡುತ್ತಾ ಓಡಾಡಿಕೊಂಡಿದ್ದ ಸರಕಾರಿ ನೌಕರರು ಇದ್ದಕ್ಕಿದ್ದಂತೆ ಮಂತ್ರಿಮಹೋದಯರನ್ನು ಅಭಿನಂದಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಇದಕ್ಕೋಸ್ಕರ ಶನಿವಾರ ಬೆಂಗಳೂರಿನಲ್ಲಿ ಅದ್ದೂರಿಯಾದ ಸಮಾರಂಭವೂ ಏರ್ಪಾಟಾಗಿದೆ. ಅದು ಒತ್ತಟ್ಟಿಗಿರಲಿ. ಬೆಂಗಳೂರಿನ ಅರಮನೆ ಆವರಣದಲ್ಲಿ ಶನಿವಾರ(ಜು.21) ಬೆಳಗ್ಗೆ ರಾಜ್ಯ ಸರಕಾರಿ ನೌಕರರ ಸಮ್ಮೇಳನ ವ್ಯವಸ್ಥೆಯಾಗಿರುವುದರಿಂದ ಮಹಾಜನತೆ ಸಂಚಾರಿ ದಟ್ಟಣೆ ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಜೆಸಿ ನಗರ, ಮೇಖ್ರಿ ಸರ್ಕಲ್‌ ಪ್ಯಾಲೇಸು ಗುಟ್ಟಹಳ್ಳಿ ದಿಕ್ಕಿನಲ್ಲಿ ಪ್ರಯಾಣ ಬೆಳೆಸಬಾರದೆಂದು ಈ ಮೂಲಕ ತಿಳಿಯಪಡಿಸಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ನೌಕರರು ಬೆಳಗ್ಗೆ ಬೆಳಗ್ಗೆ ಅರಮನೆ ಕಡೆ ಹೋಗುತ್ತಿರುತ್ತಾರೆ.

ಅಂತೆಯೇ, ನೌಕರರು ಸಮ್ಮೇಳನದ ಸಂಭ್ರಮದಲ್ಲಿರುವುದರಿಂದ ಸರಕಾರಕ್ಕೆ ಸಂಬಂಧಿಸಿದ ಯಾವ ಕಚೇರಿಯಲ್ಲೂ 3ಕಾಸಿನ ಕೆಲಸ ನಡೆಯುವುದಿಲ್ಲ. ಜುಲೈ 21ರ ಶನಿವಾರ ಒಂದು ರೀತಿ ಅನಧಿಕೃತ ರಜೆ ಸ್ಥಾಪಿತವಾಗಿರುವುದರ ಕಾರಣ ನೀವು ಸರಕಾರದ ಯಾವ ಕಚೇರಿಗೂ ಹೋಗಬಾರದೆಂದು ಈ ಮುಖಾಂತರ ತಿಳಿಸಲಾಗಿದೆ.

ಕರ್ನಾಟಕದ ಈಗಿನಕಾಲದಲ್ಲಿ ನಡೆಯುವ ಯಾವುದೇ ದೊಡ್ಡ ಸಭೆ ಸಮಾರಂಭ ಸಮ್ಮೇಳನದಲ್ಲಿ ಯಾವುದಾದರೂ ಒಂದು ಮಠದ ಯಾರಾದರೂ ಒಬ್ಬ ಗುರುಗಳು ಇರಲೇಬೇಕು. ಅದೇ ಪ್ರಕಾರ ಒಕ್ಕಲಿಗರ ಗುರು ಆದಿಚುಂಚನಗಿರಿ ಹಾಗೂ ವೀರಶೈವರ ಗುರು ಸಿದ್ದಗಂಗಾ ಶ್ರೀಗಳು ಸಮ್ಮೇಳನಕ್ಕೆ ಬರುತ್ತಾರೆಂದು ಸುದ್ದಿ.

ಮುಮಂ ಉಮುಮಂ ಮುಂತಾಗಿ ಹಿರಿಯ ರಾಜಕಾರಣಿಗಳು ಸಮ್ಮೇಳನಕ್ಕ ಆಗಮಿಸುತ್ತಿರುವುದು ಗೊತ್ತಾಗಿರುವುದರಿಂದಾಗಿ ಐದನೆ ವೇತನ ಆಯೋಗದ ಶಿಫಾರಸು ಜಾರಿ ಆಗಬೇಕು, ಖಾಲಿ ಇರುವ ಒಂದು ಲಕ್ಷ ಹುದ್ದೆಗಳು ಭರ್ತಿಯಾಗಬೇಕು, ಜಿಲ್ಲೆಯಿಂದ ಜಿಲ್ಲೆಗೆ ವರ್ಗವಾದ ನೌಕರರಿಗೆ ಕಾಲಮಿತಿ ಬಡ್ತಿ ನೀಡುವಲ್ಲಿ ಆಗಿರುವ ವಿಳಂಬ ಹೋಗಲಾಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಪಟ್ಟಿಯನ್ನು ನೌಕರ ಸಂಘ ಈಗಾಗಲೇ ರೆಡಿ ಇಟ್ಟುಕೊಂಡಿದೆ.

ಇವೆಲ್ಲ ಇದ್ದದ್ದೆ. ಆದರೆ, ಎಲ್ಲರೂ ದಿಗಿಲು ಬೀಳುವಂಥ ವರ್ತಮಾನವೇನೆಂದರೆ, ಸಮ್ಮೇಳನದಲ್ಲಿ ಒಂದು ವಿಚಾರ ಸಂಕಿರಣ ಏರ್ಪಾಟಾಗಿದೆ ಕೂಡ. ಅದರ ವಿಷಯ : ಶ್ರೀಸಾಮಾನ್ಯನ ಸಮಸ್ಯೆಗಳಿಗೆ ಶೀಘ್ರ ಸ್ಪಂದನ. ವಿಚಾರ ಸಂಕಿರಣದಲ್ಲಿ ಭಾಗಿಯಾಗುವವರು

ಪಿ. ಜಿ. ಮಹಿಷಿ ( ಸರಕಾರದ ಮುಖ್ಯ ಕಾರ್ಯದರ್ಶಿ )
ಸೈಯದ್‌ ಜಮೀರ್‌ ಪಾಷ ( ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ)
ರಾಜೀವ್‌ ಚಾವ್ಲ ( ಇ- ಗವರ್ನೆನ್ಸ್ ಕಾರ್ಯದರ್ಶಿ)

ಅಂದಹಾಗೆ, ನಿವೃತ್ತಿ ವಯೋಮಿತಿಯನ್ನು ಹಾಲಿ 58 ರಿಂದ 60 ಕ್ಕೆ ಏರಿಸಬೇಕೆಂಬ ಪ್ರಪೋಷಲ್ ಗೆ ಕೂಡ ಈ ಸಮ್ಮೇಳನ ಸಾಕ್ಷಿಯಾಗುತ್ತದೆ. ಹೆಚ್ಚಿನ ವಿವರಗಳಿಗೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಲ್‌. ಭೈರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಸ್. ಪ್ರಭಾಕರ್‌ ಅವರನ್ನು ನೀವು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X