ಡಾ.ಕೃಷ್ಣ ಮಾಹಿತಿ ಆಯೋಗದ ಅಧ್ಯಕ್ಷ :ಹೆಚ್ಚುತ್ತಿದೆ ಅಪಸ್ವರ
ಬೆಂಗಳೂರು : ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷರಾಗಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಹೆಚ್.ಎನ್.ಕೃಷ್ಣ ಅಧಿಕಾರ ಸ್ವೀಕರಿಸಿದ್ದಾರೆ. ಅವರ ನೇಮಕಾತಿ ಬಗೆಗಿನ ಅಪಸ್ವರಗಳು ಶುಕ್ರವಾರವೂ ಮುಂದುವರೆದಿವೆ.
ಡಾ.ಎಚ್.ಎನ್.ಕೃಷ್ಣ ಅವರನ್ನು ಮಾಹಿತಿ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸುರೇಂದ್ರ ಮೋಹನ್ ನೇತೃತ್ವದ ಜಾತ್ಯತೀತ ಜನತಾದಳ ಖಂಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಏಕಾಂತಯ್ಯ, ನೇಮಕ ಕಾನೂನು ಬಾಹಿರವಾಗಿದೆ. ಯಾವುದೇ ರಾಜ್ಯದ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನಿವೃತ್ತರಾದವರು, ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಬಹುದು ಅಥವಾ ಯಾವುದೇ ರಾಜ್ಯದ ಲೋಕಸೇವಾ ಆಯೋಗದ ಅಧ್ಯಕ್ಷರಾಗಬಹುದು.
ಲೋಕಸೇವಾ ಆಯೋಗದ ಹೊರತು ಬೇರೆ ಯಾವ ಆಯೋಗದಲ್ಲೂ ಕೆಲಸ ಮಾಡಲು ಸಂವಿಧಾನ ಅವರಿಗೆ ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ನಾಯಕರು ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಏಕಾಂತಯ್ಯ ವಿವರಿಸಿದರು.
ಮಾಹಿತಿ ಆಯೋಗ :
ಕೃಷ್ಣ ನೇಮಕದೊಂದಿಗೆ ಮಾಹಿತಿ ಆಯೋಗಕ್ಕೆ ಮೂವರು ಆಯುಕ್ತರು ನೇಮಕಗೊಂಡಂತಾಗಿದೆ. ಈಗಾಗಲೇ ಮುಖ್ಯ ಮಾಹಿತಿ ಆಯುಕ್ತರಾಗಿ ಕೆ.ಕೆ.ಮಿಶ್ರಾ, ಮಾಹಿತಿ ಆಯುಕ್ತರಾಗಿ ಕೆ.ಎ.ತಿಪ್ಪೇಸ್ವಾಮಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಧಿಕಾರ ವಹಿಸಿಕೊಂಡನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೃಷ್ಣ, ಮಾಹಿತಿ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಆಯೋಗದ ಸೇವೆ ಗ್ರಾಮಾಂತರ ಪ್ರದೇಶಗಳಲ್ಲಿರುವ ಜನರಿಗೆತಲುಪುವ ವಿಶ್ವಾಸ ನನಗಿದೆ ಎಂದು ಅಭಿಪ್ರಾಯಪಟ್ಟರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications